ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು- ಡಾ.ಶ್ರೀಧರ್

Spread the love

ತಿಪಟೂರು: ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ಸಾಕಷ್ಟು ಶಕ್ತಿ ಹೊಂದಿದೆ. ಪತ್ರಕರ್ತರು ಸಮಾಜದ ಸ್ವಾಸ್ಥ ಕಾಪಾಡುವ ಮೂಲಕ ಸಾಮಾಜಿಕ ಜವಾಬ್ದಾರಿ ಹೊಂದಬೇಕು ಎಂದು ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್ ಹೇಳಿದರು. ನಗರದ ನಿವೃತ್ತ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ತಾಲೂಕು ಘಟಕ ವತಿಯಿಂದ, ಪತ್ರಿಕಾ ದಿನಾಚರಣೆ ಹಾಗೂ ಸಂಘದ ಸದಸ್ಯರಿಗೆ ಗುರುತಿನ ಕಾರ್ಡು ವಿತರಣೆ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ವೈದ್ಯರು ಹಾಗೂ ಪತ್ರಕರ್ತರು ಸಮಾಜದಲ್ಲಿ ಹೆಚ್ಚು ಜವಾಬ್ದಾರಿ ಹೊಂದಿದ್ದಾರೆ‌. ಈ ಎರಡು ವೃತ್ತಿಗೂ ಸಮಯ ಎಂಬುದೇ ಇಲ್ಲ. ಪತ್ರಿಕಾರಂಗ ಇಂದು ಪತ್ರಿಕೋದ್ಯಮವಾಗಿ ಬೆಳೆದಿದೆ. ಬಂಡವಾಳ ಶಾಹಿಗಳು ಈ ಎರಡು ಕ್ಷೇತ್ರಗಳಿಗೂ ಕಾಲಿಟ್ಟಿದ್ದಾರೆ. ಪತ್ರಿಕಾರಂಗ ಹಾಗೂ ಆರೋಗ್ಯಕ್ಷೇತ್ರ ಈ ಎರಡು ಕ್ಷೇತ್ರಗಳು ಪಾವಿತ್ರತೆಯನ್ನು ಕಳೆದುಕೊಳ್ಳಬಾರದು. ಮಾನವೀಯ ಮೌಲ್ಯ ಅವಶ್ಯ, ಕೊರೋನಾ ಒಂದನೇ ಮತ್ತು ಎರಡನೇ ಅಲೆ ಮನುಷ್ಯನಿಗೆ ಸಾಕಷ್ಟು ಪಾಠ ತಿಳಿಸಿವೆ. ಸಮಾಜದಲ್ಲಿ ಯಾರಿಗೂ ತೊಂದರೆ ಕೊಡದೆ ಬದುಕುವ ಕೆಲಸ ಆಗಬೇಕು ಎಂದರು. ಗ್ರೇಡ್ 2 ತಹಸಿಲ್ದಾರ್ ಜಗನ್ನಾಥ್ ಮಾತನಾಡಿ, ಜುಲೈ ಒಂದರಂದು ಕಂದಾಯ ದಿನವನ್ನಾಗಿ ಕೂಡ ಆಚರಿಸಲಾಗುತ್ತಿದೆ‌. ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಅಂಗದ ವೀಕ್ಷಕನಾಗಿ ಪತ್ರಿಕಾಂಗ ಕೆಲಸ ಮಾಡುತ್ತಿದೆ. ಕೆಲವೊಮ್ಮೆ ತಪ್ಪು ಕಂಡುಬಂದರೆ ಚಾಟಿ ಬೀಸುವ ಮೂಲಕ ಎಚ್ಚರಿಸುವ ಕೆಲಸ ಮಾಧ್ಯಮಗಳು ಮಾಡುತ್ತಿವೆ ಎಂದರು.

ಸರ್ಕಾರಿ ಆಸ್ಪತ್ರೆ ವೈದ್ಯ ರಕ್ಷಿತ್ ಗೌಡ ಮಾತನಾಡಿ ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಆರೋಗ್ಯ ಚೆನ್ನಾಗಿದ್ದರೆ ಏನು ಬೇಕಾದರೂ ಮಾಡಬಹುದು ಎಂದರು. ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್ ಮಾತನಾಡಿ ಪತ್ರಿಕೆ ಕೊಂಡು ಓದುವ ಹವ್ಯಾಸ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಇಂದಿನ ಯುವ ಸಮೂಹ ಮೊಬೈಲ್ ಸೆಳೆತದಿಂದ ದೂರ ಇರಬೇಕು. ಪತ್ರಿಕೆ ಓದಿದರೆ ಸಿಗುವ ಖುಷಿಯೇ ಬೇರೆ. ಪತ್ರಿಕಾ ವರದಿಗಳು ವಸ್ತುನಿಷ್ಠವಾಗಿರಬೇಕು. ಸುಳ್ಳು ಸುದ್ದಿ ವೈಭವೀಕರಿಸುವುದು ಬೇಡ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗಲಿದೆ. ಪ್ರಕೃತಿ ಬದಲಾವಣೆಯಾದಂತೆ, ಮನುಷ್ಯ ಕೂಡ ಮಾನವೀಯ ಮೌಲ್ಯ, ಐಕ್ಯತೆ, ಭ್ರಾತೃತ್ವ, ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು ಎಂದರು. ಅಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹರಿಪ್ರಸಾದ್, ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ.ಎಲ್.ಎಂ‌.ವೆಂಕಟೇಶ್, ರೈಲ್ವೆ ಯೂನಿಯನ್ ನ ಕಾಂತರಾಜ್, ಕಾನೂನು ಸಲಹೆಗಾರ ಬಸವರಾಜ್, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಗುರುಮೂರ್ತಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ತಾಲೂಕು ಅಧ್ಯಕ್ಷ ಎಸ್.ಗಣೇಶ್ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಭಾಸ್ಕರಾಚಾರ್, ಉಪಾಧ್ಯಕ್ಷ ಬಳ್ಳೆಕಟ್ಟೆ ಶಂಕ್ರಪ್ಪ, ಕಾರ್ಯದರ್ಶಿ ಧರಣೀಶ ಕುಪ್ಪಾಳು, ಉರಗ ತಜ್ಞ ಬಾಣಸಂದ್ರ ರವೀಶ್, ನಿವೃತ್ತ ಶಿಕ್ಷಕ ಸೋಮಶೇಖರ್, ಬಿ.ಬಿ.ಸಿದ್ದಲಿಂಗ ಮೂರ್ತಿ, ನಾಗರಾಜು, ಮಂಜು, ವೀಣಾ, ತ್ರಿವೇಣಿ ಸುಂದರ್, ನರಸಿಂಹಯ್ಯ, ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Right Click Disabled