ಉಡುಪಿ ನಗರದಲ್ಲಿ ಅಟೋರಿಕ್ಷಾಗಳಿಗೆ ಸಂಬಂಧಿಸಿ ಹೊಸ ನಿಯಮ

ಉಡುಪಿ ನಗರದಲ್ಲಿ ಅಟೋರಿಕ್ಷಾಗಳಿಗೆ ಸಂಬಂಧಿಸಿ ಹೊಸ ನಿಯಮ
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಟೋರಿಕ್ಷಾಗಳು ಹಾಗೂ ಅಟೋರಿಕ್ಷಾ ನಿಲ್ದಾಣಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲಾಗಿದೆ. ಕಳೆದ ಆಗಸ್ಟ್ 18ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಆಧಾರದಲ್ಲಿ ಈ ನಿಯಮಗಳನ್ನು ರೂಪಿಸಲಾಗಿದೆ.
ಉಡುಪಿ ನಗರದಲ್ಲಿ ಸದ್ಯ ಅಟೋರಿಕ್ಷಾ ವಾಹನಗಳಿಗೆ ವಲಯ 1 ಹಾಗೂ ವಲಯ 2 ಎಂದು ವರ್ಗೀಕರಿಸಲಾಗಿದ್ದು, ವಲಯ 1ರಲ್ಲಿರುವ ಅಟೋ ರಿಕ್ಷಾಗಳು ಉಡುಪಿ ನಗರದ ವ್ಯಾಪ್ತಿಯೊಳಗೆ ಮಾತ್ರ ಸಂಚರಿಸಬೇಕು. ಆದರೆ ಯಾವ ನಿಲ್ದಾಣಗಳಲ್ಲಿ ಯಾವ ಆಟೋ ನಿಲ್ಲಿಸಬೇಕು ಎಂಬ ಬಗ್ಗೆ ಅಟೋ ರಿಕ್ಷಾ ಚಾಲಕರ ಮಧ್ಯೆಯೇ ವಿವಾದ ಉಂಟಾಗಿ ದಿನ ನಿತ್ಯ ಅವರವರೇ ಗಲಾಟೆ ಮಾಡಿಕೊಳ್ಳುತ್ತಿದ್ದು ಈಗಾಗಲೇ 5 ಪ್ರಕರಣಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಸದ್ಯ ಆಗುತ್ತಿರುವ ತೊಂದರೆ, ವಿವಾದಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಉಡುಪಿ ನಗರದಲ್ಲಿ ಒಟ್ಟು 41 ಅಧಿಕೃತ ಅಟೋರಿಕ್ಷಾ ನಿಲ್ದಾಣಗಳನ್ನು ಗುರುತಿಸಲಾಗಿದೆ. ಇದರೊಂದಿಗೆ 17 ಅನಧಿಕೃತ ನಿಲ್ದಾಣಗಳೂ ಇವೆ. ನಗರಸಭಾ ವ್ಯಾಪ್ತಿ ಯೊಳಗಿನ ಆಟೋರಿಕ್ಷಾ ಮತ್ತು ಆಟೋರಿಕ್ಷಾ ನಿಲ್ದಾಣಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ಜಿಲ್ಲಾಧಿಕಾರಿಗಳು ಆದೇಶದ ಮೂಲಕ ತಿಳಿಸಿದ್ದಾರೆ.
*ಹೊಸ ನೀತಿ ನಗರಸಭೆ ಉಡುಪಿ ವ್ಯಾಪ್ತಿಗೆ ಒಳಪಟ್ಟಿದೆ. ಸದ್ಯ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇರುವ 58 ಅಟೋನಿಲ್ದಾಣಗಳನ್ನು (41ಅಧಿಕೃತ, 17ಅನಧಿಕೃತ) ಗುರುತಿಸಿ ಅಧಿಕೃತ ಎಂದು ಘೋಷಿಸಲಾಗಿದೆ.
*ಅಟೋನಿಲ್ದಾಣಗಳು ನಗರಸಭಾ ಪ್ರದೇಶದ ವ್ಯಾಪ್ತಿಯಲ್ಲಿ ಇರುವು ದರಿಂದ, ಆಟೋಗಳನ್ನು ನಿಲ್ಲಿಸುವ ಬಗ್ಗೆ ನಿಲ್ದಾಣ ಪರ್ಮಿಟನ್ನು ಉಡುಪಿ ನಗರಸಭೆಯೇ ಹಂಚಿಕೆ ಮಾಡಬೇಕಾಗಿದೆ.
*ಆಟೋ ಚಾಲಕನ ಸೀಟ್ ಹಿಂಬದಿಯಲ್ಲಿ ಚಾಲಕನ ಹೆಸರು, ಆಟೋ ಸ್ಟ್ಯಾಂಡ್ ಹೆಸರು, ಆಟೋ ನೋಂದಣಿ ಸಂಖ್ಯೆ, ಮೊಬೈಲ್ ನಂಬ್ರ ಪ್ರಯಾಣಿಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶನ ಮಾಡಬೇಕು.
*ಆಟೋರಿಕ್ಷಾದ ಹಿಂದುಗಡೆ ನಗರಸಭೆಯು ನೀಡಿದ ವಲಯ ಮತ್ತು ಸ್ಟ್ಯಾಂಡ್ ಹೆಸರನ್ನು ಕಾಣುವಂತೆ ನಮೂದಿಸ ಬೇಕು. ಉಡುಪಿ ನಗರ ವ್ಯಾಪ್ತಿಯಲ್ಲಿ ವಲಯ 1 ಪರವಾನಿಗೆ ಇರುವ ರಿಕ್ಷಾಗಳಿಗೆ ಮಾತ್ರ ಅವಕಾಶ ಕೊಡಲಾಗುವುದು.
*ಈಗಾಗಲೇ ಆಟೋಸ್ಟಾಂಡ್‌ಗಳನ್ನು ಬಳಸುತ್ತಿರುವ ರಿಕ್ಷಾ ಚಾಲಕರು ಆರ್‌ಟಿಒಗೆ ಅರ್ಜಿ ಕೊಟ್ಟು, ಅಲ್ಲಿಂದ ಶಿಫಾರಸ್ಸು ಬಂದ ನಂತರ ಉಡುಪಿ ನಗರಸಭೆಯಿಂದ ತ್ವರಿತವಾಗಿ ಸ್ಟ್ಯಾಂಡ್ ಪರ್ಮಿಟ್ ಪಡೆದುಕೊಳ್ಳಬೇಕು.
*ಸಾರಿಗೆ ಇಲಾಖೆಯ ಶಿಫಾರಸ್ಸು ಇಲ್ಲದೆ ಯಾವುದೇ ಸ್ಟ್ಯಾಂಡ್ ಪರ್ಮಿಟ್ ಅವಕಾಶ ಇರುವುದಿಲ್ಲ. ಸಾರಿಗೆ ಇಲಾಖೆ ಯವರ ಶಿಫಾರಸು ಮಾಡಿದ ನಂತರ ನಗರಸಭೆಯವರು ಕಡ್ಡಾಯವಾಗಿ ಪರ್ಮಿಟ್ ನೀಡಬೇಕು.
*ಯಾವುದೇ ಆಟೋಸ್ಟ್ಯಾಂಡ್‌ನಲ್ಲಿ ಪ್ರಯಾಣಿಕರ ಜನದಟ್ಟಣೆ ಗಮನಿಸಿ ಪರಿಶೀಲಿಸಿ, ಸ್ಟಾಂಡ್ ಪರ್ಮಿಟ್ ಕೊಡ ಬೇಕು. ಇದರ ಬಗ್ಗೆ ಸಾರಿಗೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ನಿರ್ಧಾರ ತೆಗೆದುಕೊಂಡು ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು.
*ಒಂದು ಅಟೋರಿಕ್ಷಾಕ್ಕೆ ಒಂದಕ್ಕಿಂತ ಹೆಚ್ಚು ಆಟೋಸ್ಟ್ಯಾಂಡ್ ಪರ್ಮಿಟ್ ನೀಡುವಂತಿಲ್ಲ. ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 4 ಯವರೆಗೆ ವಲಯ 1ರ ಯಾವುದೇ ಚಾಲಕ, ವಲಯ 1ರ ಯಾವುದೇ ಸ್ಟಾಂಡ್‌ನಲ್ಲಿ ರಿಕ್ಷಾ ನಿಲ್ಲಿಸಬಹುದು.
*ಹೊಸ ಸ್ಟಾಂಡ್ ಗುರುತಿಸುವ ಕುರಿತು ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟೆ ವರದಿ/ಶಿಫಾರಸ್ಸಿನಂತೆ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು.
*ಪ್ರತಿ ವರ್ಷ ಕಡ್ಡಾಯವಾಗಿ ವಾಹನದ ಅರ್ಹತಾ ಪತ್ರ ವಾಹನದ ದಾಖಲಾತಿ, ಇನ್ನಿತರ ದಾಖಲಾತಿಗಳನ್ನು ನಗರಸಭೆಗೆ ಹಾಜರುಪಡಿಸಿ ಸ್ಟ್ರಾಂಡ್ ಪರ್ಮಿಟನ್ನು ನವೀಕರಣ ಮಾಡಿಸಿಕೊಳ್ಳಬೇಕು,
*ಸದ್ಯ ವಲಯ1ರಲ್ಲಿ ಇರುವ ಆಟೋಸ್ಟಾಂಡ್‌ನ್ನು ವಲಯ-2ನೇಯ ವರು ಬಳಸುತ್ತಿದ್ದಲ್ಲಿ ಎರಡು ತಿಂಗಳೊಳಗೆ ವಲಯ 1ರ ಪರವಾನಿಗೆಯನ್ನಾಗಿ ಪರಿವರ್ತಿಸಿಕೊಳ್ಳುಬೇಕು. ಇಲ್ಲದಿದ್ದಲ್ಲಿ ಅಂತಹವರಿಗೆ ವಲಯ-1ರ ಸ್ಟಾಂಡ್ ಗಳನ್ನು ಬಳಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.