ಮಾನ್ಯ ಮಾಧ್ಯಮ ಮಿತ್ರರೇ

Spread the love

ಈ ದಿನ ನಮ್ಮ ದೇಶದಲ್ಲಿ ಪತ್ರಿಕಾ ದಿನಾಚರಣೆಯನ್ನು ಸಮಸ್ತ ನೈಜ ಪತ್ರಕರ್ತರು ಆಚರಣೆ ಮಾಡುತ್ತಾರೆ. ತಮಗೆಲ್ಲಾ ಗೊತ್ತಿರಲಿ ಜೇಮ್ಸ್ ಆಗಸ್ತಸ್ ಹಿಕ್ಕಿ ಎಂಬ ಒಬ್ಬ ಇಂಗ್ಲಿಷ್ ಮಿಲಿಟರಿ ಮಾಜಿ ಸಿಪಾಯಿ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಆಗುತ್ತಿದ್ದಂತ ಅನ್ಯಾಯವನ್ನು ಕಂಡು ಸಹಿಸಲಾಗದೆ, ತಮ್ಮ ಇಂಗ್ಲಿಷ್ ಪಡೆಯ ವಿರುದ್ಧವೇ ಸಿಡಿದೆದ್ದು, ದೇಶದಲ್ಲಿ ಮೊಟ್ಟಮೊದಲ ಬಾರಿಗೆ “ಬೆಂಗಾಲಿ ಗೆಜೆಟ್” ಎಂಬ ಪತ್ರಿಕೆಯನ್ನು ಹೊರ ತಂದಂತಹ ಪತ್ರಿಕ ನಾಯಕ. ಅದೇ ರೀತಿಯಾಗಿ ಜುಲೈ 1, ಮಂಗಳೂರು ಸಮಾಚಾರ ಕನ್ನಡ ಪತ್ರಿಕೆ ಉದಯವಾದ ದಿನ.

ತಮಗೆಲ್ಲ ಒಂದು ಅರಿವಿರಲಿ, ಈ ದೇಶಕ್ಕೆ ಸ್ವಾತಂತ್ರ್ಯ ಬರಲು, ಸ್ವಾತಂತ್ರ್ಯದ ಕೃಷಿಯನ್ನು ಮಾಡಿದವರು ಪತ್ರಕರ್ತರು, ನಂತರ ಕೆಲವು ರಾಜಕೀಯ ವ್ಯಕ್ತಿಗಳು ಇದಕ್ಕೆ ಕೈಜೋಡಿಸಿದ್ದರು. ಆಗಿನ ಇಂಗ್ಲಿಷ್ ಪಡೆಗಳ ವಿರುದ್ಧ ಸಿಡಿದು ಹೇಳಬೇಕೆಂದರೆ ಎಂಟೆದೆ ಬಂಟರೆ ಆಗಿರಬೇಕಾಗಿತ್ತು. ಆದರೆ ಈಗಿನ ಕೆಲವು ಪತ್ರಕರ್ತರು ಅದಕ್ಕೆ ತದ್ವಿರುದ್ಧ.

ಈ ದೇಶದಲ್ಲಿ, ಈ ರಾಜ್ಯದಲ್ಲಿ ನಿಜವಾದ ಪತ್ರಕರ್ತರಿಗೆ ಯಾವುದೇ ರೀತಿಯ ಅನುಕೂಲಗಳು ಆಗಿಲ್ಲ, ಆಗೋದು ಇಲ್ಲ. ಪತ್ರಕರ್ತರನ್ನ ಇವತ್ತು ನೋಡ್ತಾ ಇದ್ದೀನಿ, ಸುಮಾರು ಹತ್ತು ವರ್ಷಗಳಿಂದ ನೋಡುತ್ತಾ ಬರುತ್ತಿದ್ದೇನೆ, ನಿಜವಾದ ಪತ್ರಕರ್ತರಿಗೆ ಎಷ್ಟೋ ಜನಕ್ಕೆ ಇರಲು ಸೂರಿಲ್ಲ, ಅವರು ಮಾಡುವ ಕೆಲಸದಲ್ಲಿ ಸುರಕ್ಷ ಇಲ್ಲ. ಅದಷ್ಟೇ ಅಲ್ಲ, ಕೆಲವು ರಾಜಕೀಯ ಪಂಡಿತರು, ಕೆಲವು ಬುದ್ಧಿಜೀವಿಗಳು, ಕೆಲವು ಪತ್ರಕರ್ತ ಕಿಲಾಡಿಗಳು, ಕೆಲವು ಮಾಧ್ಯಮ ಸಲಹೆಗಾರರು, ರಾಜ್ಯವನ್ನು ಆಳುವ ಸರ್ಕಾರಕ್ಕೆ ಪತ್ರಕರ್ತರ ಬಗ್ಗೆ ಸರಿಯಾಗಿ ಮಾಹಿತಿಯನ್ನು ಅಥವಾ ಸಲಹೆಯನ್ನು ಕೊಡದ ಕಾರಣ, ಇವತ್ತು ಪತಕರ್ತರ ಸ್ಥಿತಿ ಬಹಳ ಕೆಳಮಟ್ಟದಲ್ಲಿ ಇರುವಂತಾಗಿದೆ.

ಸರ್ಕಾರಗಳು ಕೂಡ ಪತ್ರಕರ್ತರನ್ನು ಒಡೆದು ಆಳುವ ನೀತಿಯನ್ನು ಮಾಡಿಕೊಂಡಿವೆ. ಪತ್ರಕರ್ತರಿಗೆ ಯಾವುದೇ ರೀತಿಯ ಜಾತಿಭೇದ, ಧರ್ಮ, ಭಾಷೆ, ರಾಜ್ಯ ಭೇದಗಳು ಇಲ್ಲ, ಆದರೆ ಇಂದಿನ ಸರ್ಕಾರಗಳು ಎಲ್ಲವನ್ನು ಬಿತ್ತಿ ಬೀಗುತ್ತಿದೆ. ಪತ್ರಕರ್ತರ ಮಧ್ಯೆ ದ್ವೇಶವನ್ನು ಬಿತ್ತುವಲ್ಲಿ ಈಗಿನ ಸರ್ಕಾರಗಳು ಎತ್ತಿದ ಕೈ. ಇಷ್ಟೆಲ್ಲ ಯಾಕೆ ಪೀಠಿಕೆ ಅಂತ ನೀವು ಅಂದುಕೊಂಡಿದ್ದೀರಾ, ಕಾರಣ ಇಷ್ಟೇ ಕೆಲವೇ ಕೆಲವು ಪತ್ರಕರ್ತರಿಗೆ ಮಾತ್ರ ಎಲ್ಲಾ ರೀತಿಯ ಸರ್ಕಾರದ ಅನುಕೂಲತೆಗಳು ಸಿಗುತ್ತಿದೆ, ಕಾರಣ ಅವರು ಆಳುವವರ ತಾಳಕ್ಕೆ ತಕ್ಕಂತೆ ಕುಣಿಯುವ ನಟರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ನಾವೇನು ವೈಯಕ್ತಿಕವಾಗಿ ಅವರಿಗೆ ವಿರೋಧಿ ಏನಲ್ಲ. ತಾರತಮ್ಯವಿಲ್ಲದೆ ಎಲ್ಲಾ ಪತ್ರಕರ್ತರಿಗೂ, ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಆಗಲಿ ಎನ್ನುವುದಷ್ಟೇ ನಮ್ಮ ಉದ್ದೇಶ.

ಇಂದಿನ ಪತ್ರಿಕಾ ದಿನಾಚರಣೆಯನ್ನು ಎಲ್ಲಾ ರೀತಿಯ ಅನುಕೂಲವನ್ನು ಪಡೆದಿರುವ ಪತ್ರಕರ್ತರು ನಿಜವಾಗಲೂ ಆಚರಣೆ ಮಾಡ್ತಾರ ಎಂಬ ಪ್ರಶ್ನೆ. ಇನ್ನು ಪತ್ರಿಕಾ ಸಂಘಟನೆಗಳ ಬಗ್ಗೆ ಹೇಳುವುದಾದರೆ ಆಯಾ ಸಂಘಗಳು, ಅವರವರ ಬುದ್ಧಿಗೆ ತಕ್ಕಂತೆ ಕೆಲಸವನ್ನು ಮಾಡಿಕೊಂಡು ಹೋಗ್ತಾ ಇದ್ದಾರೆ, ಪತ್ರಕರ್ತರಿಗೆ ಸಿಗುಬೇಕಾದಂತ ಸೌಲಭ್ಯಗಳ ಬಗ್ಗೆ ಹೋರಾಟವನ್ನು ಮಾಡಿಕೊಳ್ಳುತ್ತಾ ಬರ್ತಾ ಇದ್ದಾರೆ. ಒಟ್ಟಿನಲ್ಲಿ ನಮ್ಮ ಅನಿಸಿಕೆ ಇಷ್ಟೇ, ಎಲ್ಲಾ ಪತ್ರಕರ್ತರು ಭೇದಭಾವ, ಧರ್ಮ, ಜಾತಿ, ಭಾಷೆಭೇದ ಎಲ್ಲವನ್ನು ಬಿಟ್ಟು ಒಟ್ಟಾಗಿ ಸರ್ಕಾರದಿಂದ ಪತ್ರಕರ್ತರಿಗೆ ಬರಬೇಕಾದಂತಹ ಸಿಗಬೇಕಾದಂತಹ ಮೂಲ ಸೌಲಭ್ಯಗಳ ಬಗ್ಗೆ ಕಾನೂನಾತ್ಮಕವಾದ ಹೋರಾಟವನ್ನು ಮುಂದಿನ ದಿನಗಳಲ್ಲಿ ಒಟ್ಟಾಗಿ ಮಾಡಲಿ, ನಿಜವಾದ ಪತ್ರಕರ್ತರಿಗೆ ಜಯವಾಗಲಿ, ಇಂದಿನ ಪತ್ರಿಕಾ ದಿನಾಚರಣೆಯೂ ಅರ್ಥಪೂರ್ಣವಾಗಿರಲಿ.

Right Click Disabled