ಉಡುಪಿ:ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಒಡೆತನದ ಹೊಟೇಲಿಗೆ ಬಹುಕೋಟಿ ವಂಚನೆ
ಮಾಡಿದ ಆರೋಪದಲ್ಲಿ ಹೈಕೋರ್ಟ್ ನಿಂದ ಜಾಮೀನು ರದ್ದುಗೊಂಡು ಬಂಧಿತರಾಗಿದ್ದ ನಾಗೇಶ್ ಪೂಜಾರಿ ಎಂಬವರಿಗೆ ಉಡುಪಿಯ 2 ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಎ.ಸಮೀವುಲ್ಲಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ನಾಗೇಶ್ ಪೂಜಾರಿ ವಿರುದ್ದ ವರ್ಷದ ಹಿಂದೆ ದೂರು ದಾಖಲಾಗಿದ್ದು, ಅದರಂತೆ ನಾಗೇಶ್ ಪೂಜಾರಿಯವರು ಉಡುಪಿಯ 1 ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಶರಣಾಗಿ ಜಾಮೀನು ಪಡೆದಿದ್ದರು. ಈ ಆದೇಶವನ್ನು ಪ್ರಶ್ನಿಸಿ ದೂರುದಾರರು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಆರೋಪಿಯ ಜಾಮೀನು ಆದೇಶವನ್ನು ರದ್ದುಗೊಳಿಸಿತ್ತು. ನಂತರ ಆರೋಪಿಯನ್ನು ಪೋಲಿಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ಪ್ರಕರಣದಲ್ಲಿ ಸರ್ಕಾರದಿಂದ ವಿಶೇಷ ಸರಕಾರಿ ಅಭಿಯೋಜಕರ ನೇಮಕವೂ ನಡೆದು, ಪ್ರಕರಣದಲ್ಲಿನ ವಿಶೇಷತೆಯನ್ನು ಪ್ರಶ್ನಿಸುವಂತಿತ್ತು.
ಪೋಲಿಸರು ಆರೋಪಿಯನ್ನು 3 ದಿನ ಪೋಲಿಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಆರೋಪಿ ನ್ಯಾಯಾಲಯದ ಮುಂದೆ ಪುನಃ ಜಾಮೀನು ಅರ್ಜಿ ಸಲ್ಲಿಸಿದ್ದು, ಪ್ರಕರಣದಲ್ಲಿ ತಾನು ವರ್ಷದ ಹಿಂದೆ ಜಾಮೀನು ಪಡೆದಿದ್ದು, ಪೋಲಿಸರು ತನಿಖೆ ನಡೆಸಿಲ್ಲ. ಪ್ರಸ್ತುತ ಜಾಮೀನು ರದ್ದುಗೊಂಡ ಬೆನ್ನಲ್ಲೇ ಬಂಧನವಾಗಿರುವುದು ಪ್ರಕರಣದಲ್ಲಿನ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಹಕ್ಕನ್ನು ತನ್ನಿಂದ ಕಸಿಯಲಾಗಿದೆ ಎಂದು ಆರೋಪಿಯ ಪರವಾಗಿ ವಕೀಲರು ವಾದ ಮಂಡಿಸಿದ್ದರು.
ಆರೋಪಿಯ ಪರವಾಗಿ ವಕೀಲರಾದ ಕುಂದಾಪುರದ ಜಯಚಂದ್ರ ಶೆಟ್ಟಿ, ಮಂಗಳೂರಿನ ವಕೀಲರಾದ ವಿಕ್ರಂ ಹೆಗ್ಡೆ, ಉಡುಪಿಯ ವಕೀಲರಾದ ಅಖಿಲ್.ಬಿ.ಹೆಗ್ಡೆ ವಾದಿಸಿದ್ದಾರೆ.