ಶೆಡ್ ಧಂಸಕ್ಕೆ ಸಜ್ಜಾಗಿ ಬಂದ ಅಧಿಕಾರಿಗಳು-ಸ್ಥಳೀಯರ ಪ್ರತಿಭಟನೆಗೆ ಯೂ ಟರ್ನ್ !

ಕುಂದಾಪುರ : ಸ್ಥಳೀಯ ಖಾರ್ವಿ ಮೇಲ್ಕೇರಿ ಯಲ್ಲಿ ಇಂದು ಬೆಳ್ಳಂಬೆಳ್ಳಗ್ಗೆ ಅಕ್ರಮ ಶೆಡ್ ಎಂದು ಅದನ್ನು ಕೆಡವಲು ಪೊಲೀಸ್ ಪಡೆ ಸಹಿತ ಜೆಸಿಬಿ, ಲಾರಿ,ಹಾರೆ ಗುದ್ದಲಿ, ಕಾರ್ಮಿಕರೊಂದಿಗೆ ಸಜ್ಜಾಗಿ ಬಂದ ಅಧಿಕಾರಿಗಳು ಸ್ಥಳೀಯ ಮಹಿಳೆಯರು ಹಾಗೂ ಸಮಾಜ ಮುಖಂಡರ ಪ್ರತಿಭಟನೆಗೆ ಮಣಿದು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಿ ಹೋದ ಘಟನೆ ನಡೆದಿದೆ.* *ಇದೀಗ ಈ ಶೆಡ್ ಇರುವ ಜಾಗದಲ್ಲಿ ಅನಾದಿ ಕಾಲದಿಂದಲೂ ಒಂದು ಗೂಡಂಗಡಿ ಇದ್ದಿದ್ದು ಕಾಲಕ್ರಮೇಣ ಅದು ಮುಚ್ಚ ಲ್ಪಟ್ಟಿತು. ಮುಂದೆ ಅದೇ ಜಾಗದಲ್ಲಿ ಯಾರಿಗೂ ತೊಂದರೆಯಾಗದೆ ಪರಿಸರದವರು ಸೇರಿ ಕಷ್ಟ ಸುಖ ವಿಚಾರಿಸಿ ಕೊಳ್ಳುವ ಸಣ್ಣ ಪಂಚಾಯಿತಿ ಕಟ್ಟೆ ಯಾಗಿ ಮಾರ್ಪಟ್ಟಿತು. ಹೆಚ್ಚಾಗಿ ಮಹಿಳಾ ಸಂಘಗಳ ಸದಸ್ಯರೇ ಇಲ್ಲಿ ಸೇರುತ್ತಿದ್ದರಿಂದ ಮಳೆ ಬಿಸಿಲಿನಿಂದ ಪಾರಾಗಲು ಬಾಗಿಲು ಕಿಟಕಿಗಳು ಇರುವ ಯಾವುದೇ ಕೋಣೆಯಾಗಲಿ,ಅಕ್ರಮ ವಿದ್ಯುತ್ ಸಂಪರ್ಕವಾಗಲಿ , ಆಳವಡಿಸದೆ ನೆತ್ತಿಯ ಮೇಲೆ ಒಂದೆರಡು ತಗಡುಗಳನ್ನು ಹಾಸಿದ ಪುಟ್ಟ ಶೆಡ್ದನ್ನು ನಿರ್ಮಿಸಿಕೊಂಡಿದ್ದರು. ಸಾರ್ವಜನಿಕರ ಪಾಲಿಗೂ ಇದೊಂದು ತಂಗುದಾಣ ದಂತಿದ್ದು ಯಾರಿಗೂ ತೊಂದರೆಯಂತಿರಲಿಲ್ಲ.*
*ಆದರೆ ಪುರಸಭೆಯ ಅಧಿಕಾರಿಗಳು ಏಕಾಏಕಿ ಕೆಲವರ ಚಿತಾವಣೆ ಯಿಂದಾಗಿ ಇದೊಂದು ಬ್ರಹತ್ ಅಕ್ರಮ ಕಟ್ಟಡ ಎಂಬ ನೆಲೆಯಲ್ಲಿ ಕಾನೂನು ಬಳಸಿಕೊಂಡು ಧ್ವಂಸಕ್ಕೆ ಮುಂದಾಗಿರುವುದು ವಿಷಾದಕರ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.*
*ಇದಕ್ಕೆ ಪ್ರತಿಕ್ರಿಯಿಸಿರುವ ಪುರಸಭಾ ಸದಸ್ಯ ಚಂದ್ರ ಶೇಖರ್ ಖಾರ್ವಿ ಅವರು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ವೆಂಬಂತೆ ಪುರಸಭೆಯ ಅಧಿಕಾರಿಗಳು ವರ್ತಿಸಿರುವುದು ಅಕ್ಷಮ್ಯ.ಸಮಾಜದ ಮೇಲೆ ವೈರತ್ವ ಸಾಧಿಸುತ್ತಿರುವ ವ್ಯಕ್ತಿಯೋರ್ವನ ಚಿತಾವಣೆಗೆ ಒಳಗಾಗಿ ಕಾನೂನು ಗುಮ್ಮ ತೋರಿಸಿ ಅಕ್ರಮ ಬಹು ಮಹಡಿ ಕಟ್ಟಡ ಧ್ವಂಸಕ್ಕೆ ಹೊರಟಂತೆ ಪೋಸು ನೀಡಿರುವದು ಖಂಡನೀಯ, ಹಾಗೆ ಅಧಿಕಾರಿಗಳು ನಿಷ್ಠ,ದಕ್ಷ, ಎಂದು ಹೊರಟರೆ ಇದೆ ಕುಂದಾಪುರಲ್ಲಿ ಕಾನೂನು ಚೌಕಟ್ಟನ್ನು ಮೀರಿ ಎದ್ದು ನಿಂತ ಅದೆಷ್ಟೋ ಕಟ್ಟಡಗಳಿವೆ. ಆಕ್ರಮ ಕಾಮಗಾರಿಗಳಿವೆ. ಅವುಗಳ ಬಗ್ಗೆ ಚಕಾರ ಎತ್ತದ ಅಧಿಕಾರಿಗಳಿಗೆ ಸಾರ್ವಜನಿಕ ಉಪಯೋಗಿಯಾಗಿರುವ ಈ ಪುಟ್ಟ ಶೆಡ್ ಮಾತ್ರ ಅಕ್ರಮ ಗಗನ ಚುಂಬಿ ಕಟ್ಟಡದಂತೆ ಕಾಡುತ್ತಿರುವುದು ವಿಪರ್ಯಾಸ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದೇವೆ, ಎಂದು ಹೇಳಿದ್ದಾರೆ.*