ಕಾಯಕವೇ ಕೈಲಾಸವೆಂಬುದನ್ನು ತಿಳಿಯಬೇಕು: ಉಪ ವಿಭಾಗಾಧಿಕಾರಿ ಕಲ್ಪಶ್ರೀ.

Spread the love

ತುರುವೇಕೆರೆ: ಕಾಯಕವೇ ಕೈಲಾಸವೆಂಬುದನ್ನು ಕಂದಾಯ ಇಲಾಖೆಯ ನೌಕರರು ತಿಳಿಯಬೇಕು ಎಂದು ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಕಲ್ಪಶ್ರೀ ಕಂದಾಯ ಇಲಾಖೆ ದಿನಾಚರಣೆ2023ರ ಕಾರ್ಯಕ್ರಮದಲ್ಲಿ ತಿಳಿಸಿದರು.

ತಾಲೂಕಿನ ಮಾಯಸಂದ್ರ- ಟಿ.ಬಿ. ಕ್ರಾಸ್ ಎಸ್.ಬಿ.ಜಿ. ವಿದ್ಯಾ ಶಾಲೆಯಲ್ಲಿ ಭಾನುವಾರ ತಾಲೂಕು ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುಟ್ಟಿನಿಂದ- ಸಾವಿನವರೆಗೂ ಹಲವಾರು ದಾಖಲೆಗಳ ಕುರಿತಾಗಿ ಮಾತೃ ಇಲಾಖೆಯಾದ ಕಂದಾಯ ಇಲಾಖೆಯು ಕಾರ್ಯನಿರ್ವಹಿಸುತ್ತದೆ. ಇಲಾಖೆಯ ನೌಕರರು ತಮ್ಮ ಮನೆ, ಸಂಸಾರವನ್ನು ಬದಿಗಿಟ್ಟು, ಒತ್ತಡದಲ್ಲಿಯೇ ಸಾರ್ವಜನಿಕರಿಗಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ನೌಕರರು ‌ಅತಿ ವೇಗವಾಗಿ ಕೆಲಸ ಕಾರ್ಯ ಮಾಡಲು ಇತ್ತೀಚಿನ ದಿನಗಳಲ್ಲಿ ಇಲಾಖೆಯಲ್ಲಿ ‌ಡಿಜಿಟಲೀಕರಣ ಶುರುವಾಗಿದ್ದು, ಕಂದಾಯ ಇಲಾಖೆ ಕಾಯ್ದೆಗಳನ್ನು ಅತಿ ಹೆಚ್ಚು ಓದುವ ಮೂಲಕ ಜ್ಞಾನವನ್ನು ಅರಿಯಬೇಕು. ಇಂತಹ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ನೌಕರರು ಸಹ ತಮ್ಮ ಕುಟುಂಬಕ್ಕೆ ಸಮಯ ನೀಡುವ ಮೂಲಕ ತಮ್ಮ ಯೋಗ ಕ್ಷೇಮವನ್ನು ಸಹ ‌ ನೋಡಿಕೊಳ್ಳುವಂತೆ ಸಲಹೆ ನೀಡಿದರು. ಜೊತೆಗೆ ಸಾರ್ವಜನಿಕರೊಂದಿಗೆ ಪ್ರೀತಿ ವಾತ್ಸಲ್ಯದಿಂದ ವರ್ತಿಸಿ, ಗ್ರಾಮ ಆಡಳಿತ ಅಧಿಕಾರಿ ನೀಡುವ ವರದಿಯು ಜಿಲ್ಲಾಧಿಕಾರಿಗಳು ಸಹ ತೀರ್ಮಾನಿಸುವ ವರದಿ ಆಗಿರುತ್ತದೆ, ಆದ್ದರಿಂದ ಜನರಿಗೆ ವಸ್ತು ಸ್ಥಿತಿಯನ್ನು ತಿಳುಹಿಸಿ. ಕಾನೂನಾತ್ಮಕ‌ ಮತ್ತು ಮಾನವೀಯತೆಯನ್ನು ಮನದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಎಂದು ಕಂದಾಯ ದಿನಾಚರಣೆಯ ಶುಭಾಶಯಗಳನ್ನು ಕೋರುವ ಮೂಲಕ ಶಾಲೆಯ ವಿದ್ಯಾರ್ಥಿಗಳಿಗೆ ಇಲಾಖೆಯಲ್ಲಿ ನೀಡುವ ಸೇವೆ ಕುರಿತಾಗಿ ಅರಿವು ಮೂಡಿಸುವುದರೊಂದಿಗೆ, ಕ್ರೀಡೆಯಲ್ಲಿ ಭಾಗವಹಿಸಿದ್ದ ನೌಕರರಿಗೆ ಬಹುಮಾನಗಳನ್ನು ವಿತರಿಸಿದರು.

ಕಂದಾಯ ದಿನಾಚರಣೆ ಶುಭಾಶಯ ಕೋರುವ ಮೂಲಕ ತಹಶೀಲ್ದಾರ್ ವೈ. ಎಂ. ರೇಣುಕುಮಾರ್ ಮಾತನಾಡಿ ಪ್ರತಿ ವರ್ಷವೂ ಜುಲೈ 1ರಂದು ಕಂದಾಯ ದಿನಾಚರಣೆಯನ್ನು ಆಚರಿಸುತ್ತಿದ್ದು, ತಡದಿನವಾದ ಶನಿವಾರ ರೈತರ, ಸಾರ್ವಜನಿಕರ ಕೆಲಸ ಕಾರ್ಯಕ್ಕೆ, ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ರಜದಿನದಂದು ಆಚರಿಸುತ್ತಿದ್ದೇವೆ. ಬಹು ಮುಖ್ಯವಾಗಿ ಇಲಾಖೆಯ ನೌಕರರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದಾಗಿ ಹಾಗೂ ಸಂಬಂಧಪಟ್ಟ ಮಾಹಿತಿಗಳನ್ನು ನಿಖರವಾಗಿ ತಿಳುಹಿಸಿ ಎಂದು ಕಿವಿ ಮಾತು ಹೇಳಿದರು ಮತ್ತು ಈ ದಿನದ ವಿಶೇಷವಾಗಿ ನೌಕರರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಒತ್ತಡ ನಡುವಿನ ಸಂದರ್ಭದಲ್ಲಿ ನೌಕರರಿಗೆ ಮನವುಲ್ಲಾಸಕ್ಕಾಗಿ ಇಂತಹ ಚಟುವಟಿಕೆಗಳು ಮುಖ್ಯವಾಗಿದೆ. ಚುನಾವಣೆ, ಕೋವಿಡ್ ನಂತಹ ಸಂದರ್ಭದಲ್ಲಿ ಇಲಾಖೆಯ ನೌಕರರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ ಎಂದು ನೌಕರರಿಗೆ ‌ಪ್ರಶಂಸುವ ಮೂಲಕ ‌ ಇತ್ತೀಚಿಗೆ ‌ ವರ್ಗಾವಣೆಗೊಂಡಿರುವ ತಾಲೂಕಿನ ಗ್ರೇಡ್ 2 ತಹಶೀಲ್ದಾರ್ ಸುನಿಲ್ ಕುಮಾರ್ ಅವರನ್ನು ಇಲಾಖೆ ವತಿಯಿಂದ ಗೌರವಿಸಿ,ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಭಜನೆ. ವಿಶೇಷವಾಗಿ ಮಹಿಳಾ ನೌಕರರು ನೃತ್ಯ ಪ್ರದರ್ಶನ ಮಾಡುವ ಮೂಲಕ ಕಣ್ಮನ ಸೆಳೆದರು ಹಾಗೂ ಕಿರುತೆರೆ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಶ್ರೀಮತಿ ದಿವ್ಯ ಮತ್ತು ಗೋವಿಂದೇಗೌಡರವರು ನೆರೆದಿದ್ದವರಿಗೆ ನಗುವಿನ ಉಣ ಬಡಿಸಿದರು.

ಈ ಸಂದರ್ಭದಲ್ಲಿ ‌ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ದಿವ್ಯ ಸಾನಿಧ್ಯ ವಹಿಸಿದ್ದು,ಶಾಖಾ ಮಠದ ಶ್ರೀ ರಾಜಶೇಖರನಾಥ ಸ್ವಾಮೀಜಿ, ಆಶೀರ್ವಚನ ನೀಡಿದರು.ಮಠದ ಆಡಳಿತ ಅಧಿಕಾರಿ ರಾಜಣ್ಣ.ಎ.ಡಿ.ಎಲ್.ಆರ್. ಶಿವಶಂಕರ್, ಹಾಗೂ ಕಂದಾಯ ಇಲಾಖೆ ನೌಕರರ ಸಂಘ. ಗ್ರಾಮ ಆಡಳಿತ ಅಧಿಕಾರಿಗಳ ಸಂಘ. ಗ್ರಾಮ ಸಹಾಯಕರ ಸಂಘದ ನೌಕರರು, ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಮುಂತಾದವರು ಭಾಗವಹಿಸಿದ್ದರು.

ವರದಿ- ಸಚಿನ್ ಮಾಯಸಂದ್ರ.

Right Click Disabled