ಫ್ಯಾಕ್ಟ್‌ಚೆಕ್ : ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆ 2024ರ ವರೆಗೂ ವಿಸ್ತರಣೆಯಾಗಿದೆಯೇ? ಇಲ್ಲಿದೆ ಡೀಟೇಲ್ಸ್‌

Spread the love

ಫ್ಯಾಕ್ಟ್‌ಚೆಕ್ : ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆ 2024ರ ವರೆಗೂ ವಿಸ್ತರಣೆಯಾಗಿದೆಯೇ? ಇಲ್ಲಿದೆ ಡೀಟೇಲ್ಸ್‌
March 27, 2023 Raghavendra Hassana 0 Comments AADHAR Card, Fact Check, facts, fake, fake news, False news, PAN Card, ಫ್ಯಾಕ್ಟ್‌ಚೆಕ್, ಸುಳ್ಳುಸುದ್ದಿ
ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆ 2023ರ ಮಾರ್ಚ್ 31ನೇ ತಾರೀಖು ಕೊನೆಯ ದಿನಾಂಕ ಎಂದು ತೆರಿಗೆ ಮಂಡಳಿ ಆದೇಶಿಸಿತ್ತು. ಆದರೆ ಆಧಾರ್-ಪಾನ್‌ ಜೋಡಣೆಗಾಗಿ ಇರುವ ಕೊನೆಯ ದಿನಾಂಕವನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದೆ ಎಂಬ ಸಂದೇಶಗಳು ಮತ್ತು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.

“PAN ಕಾರ್ಡಗೆ ಆಧಾರ ಕಾರ್ಡ್ ಜೋಡಣೆಗೆ ಮುಂದಿನ ವರ್ಷ ಮಾರ್ಚ್ 2024ರ ವರೆಗೆ ಕಾಲಾವಕಾಶ ಕೊಡಲಾಗಿದೆ. ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರೂ ವೈರಲ್ ಆಗುತ್ತಿರುವಂತೆ ಆಧಾರ್-ಪಾನ್‌ ಜೋಡಣೆಗಾಗಿ ನೀಡಿರುವ ಕಾಲಾವಕಾಶವನ್ನು 2024ರ ವರೆಗೆ ವಿಸ್ತರಿಸಿರುವುದು ನಿಜವೇ ತಿಳಿಸಿ ಎಂದು ವಿನಂತಿಸಿದ್ದಾರೆ. ಹಾಗಿದ್ದರೆ ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆಗೆ ಇರುವ ಕೊನೆಯ ದಿನಾಂಕವನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದೆಯೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಅನ್ನು ಪರಿಶೀಲಿಸದಾಗ ಇದೊಂದು ನಕಲಿ ಸುದ್ದಿ ಎಂದು ತಿಳಿದುಬಂದಿದೆ. ಆಧಾರ್-ಪಾನ್‌ ಜೋಡಣೆಗಾಗಿ ಇರುವ ಕೊನೆಯ ದಿನಾಂಕವನ್ನು ಇನ್ನೊಂದು ವರ್ಷಕ್ಕೆ ಎಂದರೆ 2024 ಮಾರ್ಚ್ 31ರ ವರಗೆ ವಿಸ್ತರಿಸಲಾಗಿದೆ ಎಂಬ ಕುರಿತು ಹರಿದಾಡುತ್ತಿರುವ ಸುದ್ದಿ ನಕಲಿಯಾಗಿದ್ದು, ಸರ್ಕಾರದಿಂದ ಈ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಈಗಾಗಲೇ ಸಂಬಂಧಿತ ಪ್ರಾಧಿಕಾರ ತಿಳಿಸಿದಂತೆ ಆಧಾರ್-ಪ್ಯಾನ್‌ ಜೋಡಣೆಗೆ ಈ ವರ್ಷದ ಮಾರ್ಚ್‌ 31 ಕೊನೆಯ ದಿನಾಂಕವಾಗಿದೆ.

ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆಗೆ ಇನ್ನು 4 ದಿನಗಳು ಮಾತ್ರ ಬಾಕಿ ಇದ್ದು, ಈ ಅವಧಿಯೊಳಗೆ ಜೋಡಣೆಯಾಗದಿದ್ದರೆ ಪಾನ್‌ ಕಾರ್ಡ್‌ ಅಮಾನ್ಯವಾಗಲಿದೆ. ಜೊತೆಗೆ ಬ್ಯಾಂಕ್‌ ವ್ಯವಹಾರಗಳು ಕೂಡಾ ಸಾಧ್ಯವಾಗದು. ಅಲ್ಲದೇ ತೆರಿಗೆ ಪಾವತಿಸುವಾಗ ಹೆಚ್ಚುವರಿಯಾಗಿ ಶೇ.10 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ತೆರಿಗೆ ಮಂಡಳಿಯ ಪ್ರಕಾರ ಮಾರ್ಚ್‌ 31ರೊಳಗೆ 1 ಸಾವಿರ ರೂ. ಪಾವತಿ ಮಾಡುವ ಮೂಲಕ ಆಧಾರ್‌ ಮತ್ತು ಪಾನ್‌ ಜೋಡಣೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಇರುವ ಅಧಿಕೃತ ಲಿಂಕ್‌ https://eportal.incometax.gov.in/iec/foservices/#/pre-login/bl-link-aadhaar) ಆಗಿದೆ.

ಈ ಅವಧಿ ಮೀರಿದ ಬಳಿಕ ಪಾನ್‌ ಕಾರ್ಡ್‌ ಅಮಾನ್ಯವಾಗಲಿದ್ದು, ಮತ್ತೊಮ್ಮೆ ಇದನ್ನು ಸರಿಪಡಿಸಿಕೊಳ್ಳಲು 10 ಸಾವಿರ ರೂ ಪಾವತಿಸಬೇಕಾಗುತ್ತದೆ. ಕಳೆದ ವರ್ಷ ಮಾರ್ಚ್‌ 31ರವರೆಗೆ ಪಾನ್‌ ಆಧಾರ್‌ ಜೋಡಣೆಗೆ ಉಚಿತ ಅವಕಾಶ ನೀಡಲಾಗಿತ್ತು. ಆದರೆ ಬಹಳಷ್ಟು ಮಂದಿ ಜೋಡಣೆ ಮಾಡಿಕೊಳ್ಳದ ಕಾರಣ ಈ ಅವಧಿಯನ್ನು 1 ಸಾವಿರ ರೂ. ದಂಡ ಪಾವತಿಯೊಂದಿಗೆ 1 ವರ್ಷಗಳ ಕಾಲ ಮುಂದೂಡಲಾಗಿತ್ತು. ಮತ್ತೊಮ್ಮೆ ಈ ಅವಧಿಯನ್ನು ಮುಂದೂಡುವ ಸಾಧ್ಯತೆಗಳನ್ನು ಮೂಲಗಳು ತಳ್ಳಿಹಾಕಿವೆ.

ಮಾರ್ಚ್‌ 18 ರಂದು ಆದಾಯ ತೆರಿಗೆ ಇಲಾಖೆ ಮಾಡಿದ ಟ್ವೀಟ್‌ನಲ್ಲಿ ಹೀಗೆ ಹೇಳಲಾಗಿತ್ತು- “ಐಟಿ ಕಾಯಿದೆ 1961 ಪ್ರಕಾರ, ಎಲ್ಲಾ ಪಾನ್‌ ಕಾರ್ಡ್‌ ಹೊಂದಿರುವವರು, ಹಾಗೂ ವಿನಾಯಿತಿ ವಿಭಾಗದಡಿ ಬಾರದೇ ಇರುವವರು ತಮ್ಮ ಪಾನ್‌ ಅನ್ನು ಆಧಾರ್‌ ಜೊತೆಗೆ 31/3/23 ರೊಳಗೆ ಜೋಡಿಸುವುದು ಕಡ್ಡಾಯವಾಗಿದೆ. ” ಒಂದು ವೇಳೆ ನಿಗದಿತ ಅವಧಿಯೊಳಗೆ ಜೋಡಣೆ ಮಾಡದೇ ಇದ್ದರೆ ಶೇ.10 ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ ಹಾಗೂ ಪಾನ್‌ ಕಾರ್ಡ್‌ ಅಮಾನ್ಯವಾಗುತ್ತದೆ. ಉದಾಹರಣೆಗೆ 10 ಲಕ್ಷ ಆದಾಯ ಇದ್ದವರು ಶೇ.10 ರಷ್ಟು ಟಿಡಿಎಸ್‌ ಕಟ್ಟಬೇಕು. ಒಂದು ವೇಳೆ ಪಾನ್‌ ಆಧಾರ್‌ ಜೋಡಣೆ ಆಗದಿದ್ದರೆ ಆಗ ಅವರು ಶೇ. 20 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ವಿನಾಯ್ತಿ ಯಾರಿಗೆ?

ಅನಿವಾಸಿ ಭಾರತೀಯರಿಗೆ, ಭಾರತೀಯರಲ್ಲದ ವ್ಯಕ್ತಿಗಳಿಗೆ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಅಸ್ಸಾಂ, ಮೇಘಾಲಯ ಹಾಗೂ ಜಮ್ಮು ಕಾಶ್ಮೀರ ನಿವಾಸಿಗಳಿಗೆ ಪಾನ್-ಆಧಾರ್‌ ಜೋಡಣೆ ಅಗತ್ಯವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಆಧಾರ್-ಪಾನ್‌ ಜೋಡಣೆಗಾಗಿ ನೀಡಿರುವ ಕಾಲಾವಕಾಶದಲ್ಲಿ ಯಾವುದೇ ವಿನಾಯ್ತಿಯನ್ನು ನೀಡಿಲ್ಲ, 2023 ಮಾರ್ಚ್ 31 ಕಡೆಯ ದಿನಾಂಕವಾಗಿದ್ದು, ಒಂದು ವೇಳೆ ಸುಳ್ಳು ಸುದ್ದಿಯನ್ನು ನಂಬಿ ನೀವು ಲಿಂಕ್ ಮಾಡಿಸದಿದ್ದರೆ ಸಾಕಷ್ಟು ತೊಂದರೆಗೆ ಒಳಗಾಗುವುದಲ್ಲದೆ, ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರೆಂಟಿ.

Right Click Disabled