ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವಾದ್ಯಂತ ತಾರತಮ್ಯ: ಶ್ರೀಮತಿ ಆನಂದ ಮದನ್.

Spread the love

ವರದಿ- ಸಚಿನ್ ಮಾಯಸಂದ್ರ.

ತುರುವೇಕೆರೆ:ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವದಾದ್ಯಂತ ತಾರತಮ್ಯ ನಡೆಯುತ್ತಿದೆ ಎಂದು ಶ್ರೀಮತಿ ಆನಂದ ಮದನ ಹೇಳಿದರು.

ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ರಿ ವತಿಯಿಂದ ಗ್ರಾಮದ ಶ್ರೀರಾಜೀಮತಿ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪುರುಷನಷ್ಟೇ ಸಾಮರ್ಥ್ಯವನ್ನು ಮಹಿಳೆಯರು ಹೊಂದಿದ್ದರೂ, ಅವರನ್ನು ಕೀಳಾಗಿ ಕಾಣುವ ದುಷ್ಟ ಸಂಸ್ಕೃತಿ ನಮ್ಮ ದೇಶದಲ್ಲಿ ಇತ್ತು ಮತ್ತು ಈಗಲೂ ಅದು ಸಂಪೂರ್ಣವಾಗಿ ಕೊನೆಗೊಂಡಿಲ್ಲ.

ಮನುಸ್ಮೃತಿಯ ದುಷ್ಟ ಆಚರಣೆಗಳಿಂದಾಗಿ ಮಹಿಳೆಯರು ಸಾವಿರಾರು ವರ್ಷಗಳಿಂದ ಇಂದಿಗೂ ಶೋಷಿತರಾಗಿಯೇ ಉಳಿದಿದ್ದಾರೆ. ಮಹಿಳೆಯನ್ನು ಕಟ್ಟಕಡೆಯ ಪ್ರಜೆಯಾಗಿ ಪರಿಗಣಿಸಲಾಗುತ್ತಿತ್ತು. ಆಕೆ ಕೇವಲ ಭೂಗದ ವಸ್ತು ಅಥವಾ ಪುರುಷರ ಸೇವೆಗೆಂದೇ ಇರುವ ನಿರ್ಜೀವ, ನಿರ್ಭಾವ ವಸ್ತು ಎಂದೇ ಮನುಸಂಸ್ಕೃತಿಯ ಪುರುಷ ಪ್ರಧಾನ ವ್ಯವಸ್ಥೆ ನಡೆಸಿಕೊಂಡಿತು.

ಇಂದಿಗೂ ಮಹಿಳೆ ತನ್ನ ಇಷ್ಟದಂತೆ ಸಮಾಜದಲ್ಲಿ ಬದುಕು ಸಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಳೆ. ಮಹಿಳೆ ಯಾವ ಬಟ್ಟೆ ಧರಿಸಬೇಕು, ಎಲ್ಲಿ ಹೋಗಬೇಕು, ಯಾರ ಜೊತೆಗೆ ಮಾತನಾಡಬೇಕು, ಯಾರ ಜೊತೆಗೆ ಮದುವೆಯಾಗಬೇಕು, ಯಾವ ಶಿಕ್ಷಣ ಪಡೆಯಬೇಕು ಅನ್ನೋದನ್ನು ಪುರುಷ ಪ್ರಧಾನ ಸಮಾಜವೇ ನಿರ್ಧರಿಸುವ ಸ್ಥಿತಿ ಇಂದಿಗೂ ಮರೆಯಾಗಿಲ್ಲ.

ಇತ್ತೀಚೆಗೆ ಚಿತ್ರದುರ್ಗದ ಹಿರಿಯೂರಿನಲ್ಲಿ ಮುಟ್ಟಾದ ಮಹಿಳೆಯರು ಮನೆಯ ಹೊರಗಿನ ಕಾಡಿನಲ್ಲಿ ಮಲಗಿರುವ ಘಟನೆಯನ್ನು ಅಲ್ಲಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಪತ್ತೆ ಹಚ್ಚಿದರು.

ಹಿಂದಿನ ಕಾಲದ ಅನಿಷ್ಠ ಸಂಸ್ಕೃತಿಗಳು ಇನ್ನೂ ಕೂಡ ಮಹಿಳೆಯನ್ನು ಕಾಡುತ್ತಲೇ ಇದೆ. ಕಾಡು ಪ್ರಾಣಿಗಳ ಉಪಟಳದ ಮಧ್ಯೆಯೂ ಒಂದು ಹೆಣ್ಣಿನ ಜೀವಕ್ಕಿಂತ ಪುರುಷರ ಮಡಿ ಮೈಲಿಗೆಗೆ ಅನ್ನೋ ಮೌಢ್ಯತೆ ಹೆಚ್ಚು ಬೆಲೆ ಅನ್ನೋ ದುರಂತ ಬಹುಶಃ ಯಾವ ದೇಶದಲ್ಲಿಯೂ ಇರಲಾರದು.

ಭಾರತ ಡಿಜಿಟಲ್ ಯುಗದಲ್ಲಿದ್ದರೂ, ಇಂದಿಗೂ ಮೌಢ್ಯಾಚರಣೆಗಳಿಂದ ಹೊರ ಬಂದಿಲ್ಲ, ಮಹಿಳೆಯನ್ನು ಒಂದೆಡೆ ದೇವತೆಗೆ, ಭೂಮಿತಾಯಿಗೆ ಹೋಲಿಸುತ್ತಾ ಮತ್ತೊಂದೆಡೆ ಅವಮಾನ, ಶೋಷಣೆ ಮಾಡಲಾಗುತ್ತಿದೆ. ಸಾವಿತ್ರಿ ಬಾಯಿಫುಲೆ ಅವರಂತ ಶಿಕ್ಷಕಿ ಮಹಿಳೆಯರಿಗೆ ಶಿಕ್ಷಣ ಕೊಡಲು ಮುಂದಾಗದೇ ಇದ್ದಿದ್ದರೆ, ಇಂದಿಗೂ ಮಹಿಳೆಯರ ಸ್ಥಿತಿ ಸಮಾಜದಲ್ಲಿ ಅದೇ ರೀತಿಯಲ್ಲಿರುತ್ತಿತ್ತು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ವಿಶ್ವಜ್ಞಾನಿ ಸಂವಿಧಾನವನ್ನು ಬರೆಯದೇ ಇರುತ್ತಿದ್ದರೆ, ಮಹಿಳೆಯರ ಸ್ಥಿತಿಯನ್ನು ಇಂದು ಯೋಚಿಸಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆ ಏನೂ ಅಲ್ಲ ಅನ್ನುವ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಕೂಡ ತನ್ನ ಹಕ್ಕನ್ನು ಪಡೆಯಲು ಸ್ವತಂತ್ರಳು ಎಂದು ಸಂವಿಧಾನದಲ್ಲಿ ಬರೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮಹಿಳಾ ಸಮಾಜ ಇಂದು ನೆನೆಯಬೇಕಿದೆ‌ ಎಂದು ತಿಳಿಸಿದರು.

ಈ ವೇಳೆ ಸಂಘದ ಮಹಿಳೆಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು ನೆರವೇರಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಲೀಲಾವತಿ.ಕಾರ್ಯದರ್ಶಿ ಜ್ವಾಲಾ. ನಿರ್ದೇಶಕರುಗಳಾದ ಸ್ವರ್ಣಾಂಬ. ಭುವನೇಶ್ವರಿ. ವಿಜಯವಸಂತರಾಜ್. ಆಶಾಚಂದು. ಶೈಲಪ್ರಸಾದ್. ಸಹನಾಸತ್ಯಾನಂದ್. ಅಂಜಲಿಭಾನುಪ್ರಕಾಶ್. ಪೂರ್ಣಿಮಾಬಾಬು. ಪಾರ್ವತಮ್ಮ. ಹಾಗೂ ಸಂಘದ ಎಲ್ಲಾ ಸದಸ್ಯರುಗಳು ಮೀನಾ ನಾಗೇಂದ್ರ. ಸಂಗೀತ ಬ್ಯೂಟಿ ಪಾರ್ಲರ್. ಕೋಮಲ. ಶೃತಿ ಸೇರಿದಂತೆ ಮುಂತಾದ ಮಹಿಳೆಯರು, ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿದ್ದರು.

Right Click Disabled