ಮಲ್ಪೆ ಮಹಾಲಕ್ಷ್ಮಿ ಕೋ.ಆಪರೇಟಿವ್ ಸೊಸೈಟಿ ಮ್ಯಾನೇಜರ್ ಆತ್ಮಹತ್ಯೆ

Spread the love

ಯಶ್ಪಾಲ್ ಸುವರ್ಣ ಸಹಿತ ಐವರ ವಿರುದ್ಧ ಪ್ರಕರಣ ದಾಖಲು!
ಮಲ್ಪೆ: ಉಡುಪಿ ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಸುಬ್ಬಣ್ಣ (50) ಎಂಬವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಅಧ್ಯಕ್ಷ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಸೇರಿದಂತೆ ಐವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ಸುಬ್ಬಣ್ಣ ಮಾ.8ರಂದು ರಾತ್ರಿ ವೇಳೆ ಮಲ್ಪೆಯ ರಾಜ್ ಮಹಲ್ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದ ಬಳಿ ಡೆತ್ ನೋಟ್ ದೊರಕಿದ್ದು, ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಒತ್ತಡ ಮೇಲಾಧಿಕಾರಿಯ ಅಸಹಕಾರ ಮತ್ತು ಸಾಲಗಾರನ ಮೋಸದ ನಡವಳಿಕೆ ಕಾರಣ ಎಂದು ದೂರಲಾಗಿದೆ.

ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಆಡಳಿತ ನಿರ್ದೇಶಕ ಜಗದೀಶ್ ಮೊಗವೀರ, ಮಾಜಿ ಆಡಳಿತ ನಿರ್ದೇಶಕ ಜೆ.ಕೆ ಸೀನ ಗಂಗೊಳ್ಳಿ, ಮ್ಯಾನೇಜರ್ ಸಾರಿಕಾ, ಸಾಲಗಾರ ರಿಯಾಝ್ ಎಂಬವರು ನೀಡಿದ ಮಾನಸಿಕ ಒತ್ತಡ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಸಾಲ ವಸೂಲಾತಿಯನ್ನು ಮಾಡಿ ಕೊಡದಿದ್ದರೆ ನಿನ್ನ ಮನೆಯನ್ನಾದರೂ ಮಾರಿ ಬ್ಯಾಂಕಿನ ಸಾಲ ತೀರಿಸಬೇಕು, ಇಲ್ಲದಿದ್ದರೆ ನಿನ್ನ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮೃತರ ಸಹೋದರ ಸುರೇಶ್ ಕೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಾವಿನ ಬಗ್ಗೆ ಸಂಶಯ ಇದ್ದು, ಆದುದರಿಂದ ಆಡಳಿತ ಮಂಡಳಿ ಮತ್ತು ಸಾಲಗಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಅದರಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Right Click Disabled