Spread the love

ಬೆಂಗಳೂರು; ರಾಜ್ಯ ಕೈಗಾರಿಕೆ, ಕೌಶಲ್ಯ ವಲಯದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು, ಕೈಗಾರಿಕಾ ಪ್ರದೇಶಗಳಲ್ಲಿ ಅತ್ಯಾಧುನಿಕ ಟೌನ್ ಶಿಪ್ ಗಳ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಪೀಣ್ಯ ಕೈಗಾರಿಕಾ ಸಂಘ ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪಿಐಎ ಎಂಎಸ್ಎಂಇ ಎಕ್ಸಲೆನ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪೀಣ್ಯಾ ಕೈಗಾರಿಕಾ ಪ್ರದೇಶ ಒಳಗೊಂಡಂತೆ ರಾಜ್ಯದ ಎಲ್ಲಾ ಕೈಗಾರಿಕಾ ಭಾಗಗಳಲ್ಲಿ ಆಧುನಿಕ ಟೌನ್ ಶಿಪ್ ಗಳು ಅಗತ್ಯವಾಗಿವೆ. ಭದ್ರತೆ, ಸುರಕ್ಷತೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇವು ಒಳಗೊಳ್ಳಬೇಕು. ಇಂತಹ ಸೌಕರ್ಯ ಕಲ್ಲಿಸಲು ಸರ್ಕಾರದ ಎಲ್ಲಾ ಹಂತಗಳಲ್ಲೂ ತಾವು ಪ್ರಯತ್ನಶೀಲರಾಗಿರುವುದಾಗಿ ತಿಳಿಸಿದರು.
ಕೈಗಾರಿಕೆಗೆ ಅತ್ಯಂತ ಅಗತ್ಯವಾಗಿರುವುದು ಕೌಶಲ್ಯ. ಕೌಶಲ್ಯಾಭಿವೃದ್ದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಮುತುವರ್ಜಿ ವಹಿಸಿವೆ. ರಾಜ್ಯದಲ್ಲಿ ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ನೀಡುವ ಸಂಸ್ಥೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪಿಸಲಾಗಿದ್ದು, ಮೂರ್ನಾಲ್ಕು ರಾಜ್ಯಗಳಿಗೆ ಅಗತ್ಯವಿರುವ ಕೌಶಲ್ಯವನ್ನು ಒದಗಿಸುವ ಸಾಮರ್ಥ್ಯ ಕರ್ನಾಟಕಕ್ಕೆ ಇದೆ. ಭವಿಷ್ಯದಲ್ಲಿ ಕೈಗಾರಿಕೆಗಳಿಗೆ ಕೌಶಲ್ಯದ ಶಕ್ತಿಯ ಸಮಸ್ಯೆ ಎದುರಾಗದು ಎಂದು ಹೇಳಿದರು.
ಕೈಗಾರಿಕೆ, ನಾವೀನ್ಯತೆ, ಸಂಶೋಧನಾ ಕ್ಷೇತ್ರದಲ್ಲಿ ಕರ್ನಾಟಕ ಮಹತ್ವದ ಸಾಧನೆ ಮಾಡುತ್ತಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಕೈಗಾರಿಕಾ ವಲಯಕ್ಕೆ ಸರ್ಕಾರ ಬೆಂಬಲ ನೀಡಲಿದೆ. ನಾವು ಮೊದಲ, ಎರಡನೇ ಹಾಗೂ ಮೂರನೇ ಕೈಗಾರಿಕಾ ಕ್ರಾಂತಿಯನ್ನು ತಪ್ಪಿಸಿಕೊಂಡಿದ್ದೇವೆ‌. ನಾವೀಗ ನಾಲ್ಕನೇ ಹಂತದ ಕೈಗಾರಿಕಾ ಕ್ರಾಂತಿಯಲ್ಲಿ ಮಹತ್ವದ ಸಾಧನೆ ಮಾಡಬೇಕು ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೈಗಾರಿಕಾ ಬೆಳವಣಿಗೆಯಿಂದ ಉದ್ಯೋಗ ಸೃಷ್ಟಿ ಜೊತೆಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ. ಇದಕ್ಕೆ ಪೀಣ್ಯಾ ಕೈಗಾರಿಕಾ ಪ್ರದೇಶ ಜ್ವಲಂತ ಉದಾಹರಣೆ ಎಂದರು.

ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನ ಸದ್ಗುರು ಮಧುಸೂಧನ್ ಸಾಯಿ ಮಾತನಾಡಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದರೆ ಅದರಿಂದ ಹೆಚ್ವಿನ ಪ್ರತಿಫಲ ಪಡೆಯಬಹುದು. ಸಮಾಜಕ್ಕೆ ನೀಡುವ ಪ್ರತಿಯೊಂದು ಸೇವೆಯೂ ದೇವರ ಸೇವೆಯಾಗುತ್ತದೆ. ಪೀಣ್ಯಾ ಕೈಗಾರಿಕಾ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುವುದು. ಮಾಗಡಿ ರಸ್ತೆಯ ಚೆನ್ನೇನಹಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುತ್ತಿದ್ದು, ಇಲ್ಲಿ ಕೆ.ಜಿಯಿಂದ ಪಿಜಿವರೆಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಲಾಗುವುದು ಎಂದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಮಾತನಾಡಿ, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಪೀಣ್ಯಾ ಕೈಗಾರಿಕಾ ಪ್ರದೇಶ ಸಮಸ್ಯೆಗಳಿಗೆ ಸಿಲುಕಿತ್ತು. ಇದೀಗ ಚೇತರಿಸಿಕೊಳ್ಳುತ್ತಿದೆ. ಸರ್ಕಾರ ಇಲ್ಲಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹೆಚ್ ಮಂಜುನಾಥ್ ಮಾತನಾಡಿ,
ಪೀಣ್ಯ ಕೈಗಾರಿಕಾ ಪ್ರದೇಶ ದಕ್ಷಿಣ ಏಷಿಯಾದಲ್ಲಿಯೇ ಅತೀ ದೊಡ್ಡ ಕೈಗಾರಿಕಾ ಪ್ರದೇಶವಾಗಿದ್ದು, 48 ಕಿಲೋ ಮೀಟರ್ ಗಳಷ್ಟು ವಿಶಾಲವಾದ ಪ್ರದೇಶದಲ್ಲಿ 16000ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಪೀಣ್ಯ ಕೈಗಾರಿಕಾ ಸಂಘ ಸುಮಾರು 7000ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸದಸ್ಯತ್ವ ಹೊಂದಿವೆ. ನಾಲ್ಕು ಲಕ್ಷ ಮಹಿಳೆಯರಿಗೆ ಕೆಲಸ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಎಫ್ ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ, ಕಾಸಿಯಾ ಅಧ್ಯಕ್ಷ ಕೆ ಎನ್ ನರಸಿಂಹಮೂರ್ತಿ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಮಂಜುನಾಥ್ ಹೆಚ್., ಹಿರಿಯ ಉಪಾಧ್ಯಕ್ಷ ಅರಿಫ್ ಹೆಚ್.ಎಂ., ಉಪಾಧ್ಯಕ್ಷ ಶಿವಕುಮಾರ್ ಆರ್. ಗೌ. ಕಾರ್ಯದರ್ಶಿ ಚಂದ್ರಶೇಖರ್ ಎಂ. ಜಂಟಿ ಕಾರ್ಯಕದರ್ಶಿ ಮಲ್ಲೇಶ್ ಗೌಡ ಹೆಚ್‌, ಕೆ. ಖಜಾಂಚಿಗಳಾದ ತಿಪ್ಪೇಶಪ್ಪ ಬಿ. ಸಿ., ರಮೇಶ್‌ ಹೆಚ್‌, ಬಿ ಮತ್ತಿತರರು ಪಾಲ್ಗೊಂಡಿದ್ದರು.

Right Click Disabled