ತಳ ಸಮುದಾಯಗಳ ನೆರವಿಗೆ ನ್ಯಾಯ ವೇದಿಕೆಯಿಂದ ʼಸಂವಿಧಾನ್ ಫೆಲೋಶಿಫ್ʼಗೆ ಚಾಲನೆ
ಬೆಂಗಳೂರು, ನ, 18; ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್‌ನಲ್ಲಿ ʼನ್ಯಾಯʼ ವೇದಿಕೆ ಆಯೋಜಿಸಿದ್ದ ರಾಜ್ಯದ ಏಳು ಜಿಲ್ಲೆಗಳಲ್ಲಿನ ವಕೀಲರಿಗೆ ಪ್ರಥಮ ಸಂವಿಧಾನ ಫೆಲೋಶಿಫ್‌ಗೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ತಳ ಸಮುದಾಯಗಳಿಗೆ ಕಾನೂನು ನೆರವು, ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರು, ಹಾಸನ, ಯಲ್ಲಾಪುರ, ಚಾಮರಾಜನಗರ, ಕಲಬುರ್ಗಿ ಮತ್ತು ಮೈಸೂರಿನ ವಕೀಲರಿಗೆ ಸಂವಿಧಾನ ಫೆಲೋಶಿಫ್ ದೊರೆತಿದೆ.
ನಾಗರಿಕರಿಗೆ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಅಂತಹ ಹಕ್ಕುಗಳನ್ನು ಜಾರಿಗೊಳಿಸಲು ಜನರ ನಡುವೆ ಸೇತುವೆಯಾಗುವ ಉದ್ದೇಶದಿಂದ ‘ನ್ಯಾಯ’ ವೇದಿಕೆಯು ಆರಂಭಿಸಿರುವ ಸಂವಿಧಾನ್ ಫೆಲೋಶಿಪ್‌ನ ಪ್ರಥಮ ಫೆಲೋಶಿಪ್ ಅಂಗವಾಗಿ ವೇದಿಕೆಯು ಆಯೋಜಿಸಿದ್ದ ವಿವಿಧ ಕಾರ್ಯಾಗಾರಗಳ ಈ ಜಿಲ್ಲೆಗಳ ವಕೀಲರು ಪಾಲ್ಗೊಂಡರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರಾದ ವಿಗ್ನೇಶ್ ಕುಮಾರ್ ಮಾತನಾಡಿ, “ದುರ್ಬಲ ಸಮುದಾಯದ ಜನರಿಗೆ ಕಾನೂನಾತ್ಮಕವಾಗಿ ಲಭ್ಯವಿರುವ ಹಕ್ಕುಗಳ ಕುರಿತಾದ ಮಾಹಿತಿ ಮತ್ತು ಅವುಗಳು ಅವರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ವಿಭಿನ್ನ ವಿಭಾಗದಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡುವವರನ್ನು ಒಟ್ಟಿಗೆ ತಂದಿರುವ ಪ್ರಯತ್ನ ಶ್ಲಾಘನೀಯ” ಎಂದು ಅವರು ಫೆಲೋಶಿಪ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ವಕೀಲ ಹರೀಶ್ ನರಸಪ್ಪ ಮಾತನಾಡಿ, “ಕಾನೂನು ನೆರವಿಗಾಗಿ ಸಂಪರ್ಕಿಸಿದ ಕಕ್ಷಿದಾರರು ಸೇರಿದಂತೆ ಎಲ್ಲಾ ಕಕ್ಷಿದಾರರನ್ನು ವಕೀಲರು ವೃತ್ತಿಪರತೆಯಿಂದ ಕಾಣಬೇಕು. ಎಲ್ಲಾ ದಾವೆದಾರರಿಗೂ ನ್ಯಾಯದಾನ ಮಾಡಿಸುವ ಕರ್ತವ್ಯ ವಕೀಲರದ್ದಾಗಿರುತ್ತದೆ” ಎಂದು ತಿಳಿಸಿದರು.
ಡಿಜಿಟಲ್ ಸಂಪನ್ಮೂಲ ಮುಕ್ತ ವೇದಿಕೆಯಾದ ನ್ಯಾಯ ವೇದಿಕೆಯು ದೈನಂದಿನ ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ಸರಳವೂ, ಕಾರ್ಯಸಾಧುವೂ, ವಸ್ತುನಿಷ್ಠವೂ ಮತ್ತು ಎಲ್ಲರಿಗೂ ಲಭ್ಯವಾಗುವ ಕಾನೂನು ಮಾಹಿತಿಯನ್ನು (ಸರಳ್) ಬಹು ವಿಧಾನದಲ್ಲಿ ನೀಡುತ್ತಿದೆ. ತಳ ಸಮುದಾಯಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ʼನ್ಯಾಯʼದ ಪಾಲುದಾರ ಸಂಸ್ಥೆಗಳ ಜೊತೆ ದೇಶದ ವಿವಿಧ ಜಿಲ್ಲೆಗಳ್ಲಲಿ ಕೆಲಸ ಮಾಡಲು ವಕೀಲರ ನೆಟ್‌ವರ್ಕ್ ರೂಪಿಸಲು ಸಂವಿಧಾನ ಫೆಲೋಶಿಫ್ ಎಂಬ ಒಂದು ವರ್ಷದ ತಳಮಟ್ಟದ ಯೋಜನೆ ಜಾರಿಗೊಳಿಸಲಾಗಿದೆ. ಪ್ರಥಮ ಸಂವಿಧಾನ ಫೆಲೋಶಿಫ್‌ನಲ್ಲಿ ಬೆಂಗಳೂರು, ಹಾಸನ, ಯಲ್ಲಾಪುರ, ಚಾಮರಾಜನಗರ, ಕಲಬುರ್ಗಿ ಮತ್ತು ಮೈಸೂರಿನ ಏಳು ವಕೀಲರು ಇರಲಿದ್ದಾರೆ.
ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಸ್ತರದವರ ಜೊತೆ ವಿವಿಧ ವಿಚಾರಗಳ ಕುರಿತು ಜಾಗೃತಿ ಮೂಡಿಸುವ ಚರ್ಚೆ ಆಯೋಜಿಸಲಾಗಿತ್ತು. ಸಾಲಿಡಾರಿಟಿ ಪ್ರತಿಷ್ಠಾನವು ʼವಿಭಿನ್ನತೆ ಮತ್ತು ಒಳಗೊಳ್ಳುವಿಕೆʼ ಎನ್ನುವ ವಿಚಾರವಾಗಿ ತಿಳಿಸಿಕೊಟ್ಟರೆ, ವೈಕಲ್ಯತೆ ಹೊಂದಿರುವವರ ಜೊತೆ ಕೆಲಸ ಮಾಡುವ ವಿಷಯವಾಗಿ ಸಮರ್ಥನಮ್ ಟ್ರಸ್ಟ್‌ನ ವಿಕ್ಟರ್ ಜಾನ್ ಕೊರ್ಡೈರೊ, ʼದಲಿತ, ಬಹುಜನ ಮತ್ತು ಆದಿವಾಸಿ ಸಮುದಾಯಗಳ ಸಾಮಾಜಿಕ-ಸಾಂಸ್ಕೃತಿಕ ಅಗತ್ಯಗಳು ಮತ್ತು ಕಾನೂನಾತ್ಮಕ ಹಕ್ಕುಗಳುʼ ಕುರಿತು ವಕೀಲರಾದ ಅಶ್ವಿನಿ ಓಬುಳೇಶ್ ವಿವರಿಸಿದರು. ಸಿನಿಮಾ ನಿರ್ದೇಶಕ ಕೆ ಎಂ ಚೈತನ್ಯ ಮತ್ತು ನಟಿ ಅಕ್ಷತಾ ಪಾಂಡವಪುರ ಅವರು ರಂಗಭೂಮಿ ಕುರಿತಾದ ಕಾರ್ಯಾಗಾರ ನಡೆಸಿದರು.
ಬೆಸ್ಟ್ ಪ್ರಾಕ್ಟೀಸ್ ಫೌಂಡೇಶನ್, ಸ್ತ್ರೀ ಜಾಗೃತಿ ಸಮಿತಿ, ಸಮರ್ಥನಂ, ಸಾಲಿಡಾರಿಟಿ ಪ್ರತಿಷ್ಠಾನ, ಹಸಿರು ದಳ ಮತ್ತು ಸಿವಿಕ್, ಎಸ್‌ಐಸಿಎಚ್‌ಆರ್‌ಇಎಂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲರೂ ಒಟ್ಟಾಗಿ ಸಂವಿಧಾನದ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.