ನೂಪುರ ಶರ್ಮಾ ಹೇಳಿಕೆಗೆ ಉದ್ವೇಗ ಬೇಡ:- ಡಾ.ಆರೂಢಭಾರತೀ ಶ್ರೀ

Spread the love

ಬೆಂಗಳೂರು: ಮಹಮ್ಮದ್ ಪೈಗಂಬರ್ ಕುರಿತು ನೂಪುರ ಶರ್ಮಾ ಹೇಳಿದ್ದಾರೆನ್ನಲಾದ ಕುರಿತು ಜನತೆ ಉದ್ವೇಗಕ್ಕೆ ಒಳಗಾಗಬಾರದೆಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾಮೋಹಳ್ಳಿಯ ಶ್ರೀಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ
ಶ್ರೀಶ್ರೀಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಹೇಳಿದರು. ನಮ್ಮ ಕೈಗೆಟುಕದ ಅಗೋಚರ ಶಕ್ತಿ ದೇವರು. ಅದು ಹೆಣ್ಣೂ ಅಲ್ಲ. ಗಂಡೂ ಅಲ್ಲ. ಗಂಡು ಹೆಣ್ಣು ನಪುಂಸಕವಾಗಿ ತೋರುವುದೆಲ್ಲ ದೇವರು. ಅದು ಬರೀ ಮುಸ್ಲಿಮರದಲ್ಲ, ಬರೀ ಕ್ರೈಸ್ತರದಲ್ಲ, ಬರೀ ಹಿಂದುಗಳದ್ದಲ್ಲ. ಅದು ಎಲ್ಲರದ್ದೂ. ಎಲ್ಲರಿಗೂ ಒಬ್ಬನೇ ದೇವರು. ದೇವರು ದೊಡ್ಡವ, ಎಲ್ಲಕ್ಕಿಂತ ಎಲ್ಲರಿಗಿಂತ ಸದಾ ದೊಡ್ಡವ. ಆದ್ದರಿಂದ ಆತನು ಸರ್ವವ್ಯಾಪಿ ನಿರಾಕಾರ ಎಂದು ಒಪ್ಪಬೇಕು. ಆತನೇ ಜಗತ್ತಿನ ತಂದೆ ಸೃಷ್ಟಿಕರ್ತ. ಸಕ್ಕರೆಯೇ ಸಕ್ಕರೆಯ ಗೊಂಬೆಯಾಗುವಂತೆ ನಿರಾಕಾರ ದೇವರೇ ಸಾಕಾರ ಜಗತ್ತಾಗಿದ್ದಾನೆ. ತೋರುವುದೆಲ್ಲವೂ ದೇವರೇ. ಎರಡನೆಯ ಮಾತೇ ಇಲ್ಲ. ನಾವು ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ ಬೇರೆ ಬೇರೆ ಧರ್ಮದವರು ದೇವರ ಸ್ವರೂಪವನ್ನು ಬೇರೆ ಬೇರೆಯಾಗಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ. ಹಾಗಿದ್ದರೂ ದೇವರು ಬೇರೆ ಬೇರೆ ಆಗುವುದಿಲ್ಲ. ಅವನು ಇರುವಂತೆಯೇ ಇರುತ್ತಾನೆ. ಇನ್ನು ಸಕಲ ಜೀವಿಗಳಿಗೆ ಲೇಸನ್ನೇ ಬಯಸುವುದು ಧರ್ಮ. ಅನ್ಯ ಧರ್ಮದವರನ್ನು, ದೇವಸ್ಥಾನಗಳನ್ನು ಕೊಲ್ಲಿರಿ ನಾಶಪಡಿಸಿರಿ ನಿಂದಿಸಿರಿ ಎಂದು ಪ್ರತಿಪಾದಿಸುವ ಧರ್ಮವು ಧರ್ಮ ಎನಿಸದು. ಅಂಥ ಧರ್ಮವನ್ನು ಒಪ್ಪಬೇಕಿಲ್ಲ. ಧರ್ಮದ ಇಂಥ ಅಂಶಗಳಿಗೆ ಕತ್ತರಿ ಹಾಕಿ ತಿದ್ದುಪಡಿ ತರುವ ಮೂಲಕ ಎಲ್ಲಾ ಧರ್ಮದವರೂ ವಿಶಾಲತೆಯನ್ನು ಮೆರೆಯಬೇಕು. ಜನಸಾಮಾನ್ಯರಿಗೆ ದೇವರ ಬಗ್ಗೆ ಆಳವಾದ ತಿಳಿವಳಿಕೆ ಇರುವುದಿಲ್ಲ. ಆದರೆ ಅವರವರಿಗೆ ಅವರವರ ಧರ್ಮ ದೇವರ ಬಗ್ಗೆ ಅಪಾರ ಶ್ರದ್ಧಾ ಭಕ್ತಿಗಳು ಇರುತ್ತವೆ. ಆದ್ದರಿಂದ ಇದನ್ನೇ ಬಂಡವಾಳವಾಗಿಟ್ಟುಕೊಂಡು ಧರ್ಮ ದೇವರುಗಳನ್ನು ಟೀಕಿಸಬಾರದು. ಅವಹೇಳನ ಮಾಡಬಾರದು. ಸಾಮಾಜಿಕ ಸಾಮರಸ್ಯವನ್ನು ಕದಡಬಾರದು. ಜನರು ಉದ್ರೇಕ ಉದ್ವೇಗಗಳಿಗೆ ಒಳಗಾಗದೇ ವಾಸ್ತವಾಂಶವನ್ನು ಮನಗಾಣಬೇಕು ಎಂದು ಅವರು ಅರಿಕೆ ಮಾಡಿಕೊಂಡಿದ್ದಾರೆ.

Right Click Disabled