ದೊಡ್ಡಣಗುಡ್ಡೆ ಶ್ರೀ ರಮಾನಂದ ಗುರೂಜಿ ಅವರಿಗೆ‘ರಾಷ್ಟ್ರೀಯ ಧಾರ್ಮಿಕ ರತ್ನ ಪ್ರಶಸ್ತಿ’ ಪ್ರದಾನ

ಉಡುಪಿ, ಸೆ. 8: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರಿಗೆ ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಕೊಡಲ್ಪಡುವ ‘ರಾಷ್ಟ್ರೀಯ ಧಾರ್ಮಿಕ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭ ಶ್ರೀ ಕ್ಷೇತ್ರ ದೊಡ್ಡಣಗುಡ್ಡೆಯಲ್ಲಿ ಇತ್ತೀಚೆಗೆ ನಡೆಯಿತು.
ಪ್ರಶಸ್ತಿ ಪ್ರದಾನ ನೆರವೇರಿಸಿದ ಸುರ್ವೆ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ರಮೇಶ್ ಸುರ್ವೆ ಮಾತನಾಡಿ, ರಮಾನಂದ ಗುರೂಜಿಯವರು ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರವಾದುದು. ವ್ಯಕ್ತಿಯೋರ್ವ ತನ್ನ ಕಠಿನ ಪ್ರಯತ್ನ, ನಿರಂತರ ಪರಿಶ್ರಮದ ಮೂಲಕ ಏನನ್ನು ಬೇಕಾದರೂ ಸಾಧನೆ ಮಾಡಿ ತೋರಿಸಬಹುದು ಎಂಬುದಕ್ಕೆ ಗುರೂಜಿಯವರು ಜ್ವಲಂತ ಸಾಕ್ಷಿಯಾಗಿದ್ದಾರೆ. ಅವರು ತಮ್ಮಲ್ಲಿಗೆ ಕಷ್ಟ ಪರಿಮಾರ್ಜನೆ ಮತ್ತು ಸಾಂತ್ವಾನ ಬಯಸಿ ಬರುವವರಿಗೆ ತಾನು ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸಿದ್ದೇನೆ ಎಂದು ಹೇಳಿದವರಲ್ಲ. ಬದಲಾಗಿ ತಾಯಿ ದುರ್ಗಾ ಆದಿಶಕ್ತಿಯ ಪ್ರೇರಣೆಯಂತೆ ಸೇವೆ ಮಾಡಿದ್ದೇನೆ ಅಷ್ಟೇ ಎನ್ನುವ ಸರಳತೆ ಅವರದ್ದು. ಗುರೂಜಿಯವರ 60ರ ಸಾಧನೆಯ ಹೊತ್ತಗೆಯನ್ನು ರಚಿಸುವ ಹಂಬಲ ವ್ಯಕ್ತಪಡಿಸಿದರು.
ಚಿತ್ರನಟಿ ಮೀನಾ ಅವರು, ಗುರೂಜಿಯವರು ಕೇವಲ ಸಂಕಷ್ಟಗಳಿಗೆ ಪರಿಹಾರ ದೊರಕಿಕೊಡುವುದಲ್ಲದೆ, ಕಂಗೆಟ್ಟವರಿಗೆ ಸಮರ್ಪಕವಾದ ಶಾಶ್ವತ ಪರಿಹಾರ ಸೂಚಿಸುತ್ತಾ ಬಂದಿದ್ದಾರೆ. ಕಳೆದ 15 ವರ್ಷಗಳಿಂದ ಹೆಜ್ಜೆ ಹೆಜ್ಜೆಗೂ ಗುರೂಜಿಯವರ ಮಾರ್ಗದರ್ಶನ ಪಡೆಯುತ್ತಿದ್ದೇನೆ ಎಂದರು.
ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಉಷಾ ರಮಾನಂದ, ಉದ್ಯಮಿಗಳಾದ ದೀಪಕ್ ಕುಮಾರ್, ಆನಂದ ಬಾಯರಿ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್, ಪ್ರಧಾನ ಅರ್ಚಕ ಅನೀಶ್ ಆಚಾರ್ಯ, ನ್ಯಾಯವಾದಿಗಳಾದ ಇ. ಬಾಲಸುಬ್ರಮಣ್ಯ, ಶಿವಪ್ರಸಾದ್ ಹೆಗ್ಡೆ, ಪ್ರಸನ್ನ ಕುಮಾರ್, ಗಣ್ಯರು, ಹಿತೈಷಿಗಳು, ಕ್ಷೇತ್ರದ ಸಿಬಂದಿ, ಭಕ್ತರು ಉಪಸ್ಥಿತರಿದ್ದರು.