ಯುವಕರಲ್ಲಿ ದೇಶಪ್ರೇಮ ಸದಾ ಜಾಗೃತವಾಗಿರಬೇಕು; ಡಾ. ಎಚ್ ಎಸ್ ಬಲ್ಲಾಳ್

ಮಣಿಪಾಲ: `ದೇಶದ ಪ್ರತಿಯೊಬ್ಬ ನಾಗರಿಕರಲ್ಲೂ ದೇಶಪ್ರೇಮ ಜಾಗೃತವಾಗಿರಬೇಕು. ಅದರಲ್ಲೂ ಯುವ ಮನಸ್ಸುಗಳಲ್ಲಿ ದೇಶಪ್ರೇಮ ತುಂಬಿರಲೇಬೇಕು. ಈ ನೆಲೆಯಲ್ಲಿ ದೇಶ ಪ್ರೇಮವನ್ನು ಮೂಡಿಸುವ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತಿರಬೇಕು. ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ರೇಡಿಯೋ ಮಣಿಪಾಲ್ ನಲ್ಲಿ ಆಯೋಜಿಸಲಾದ ದೇಶಭಕ್ತಿಗೀತೆ ಸಮೂಹ ಗಾಯನ ಸ್ಪರ್ಧಾ ಕಾರ್ಯಕ್ರಮ ಅಭಿನಂದನೀಯ’ ಎಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಹೇಳಿದರು.
ಅವರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರವು ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉಡುಪಿ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂ ಐ ಸಿ) ಸಂಸ್ಥೆಯ ನಿರ್ದೆಶಕರಾದ ಡಾ. ಶುಭ ಎಚ್.ಎಸ್ ಅವರು ಸ್ವಾಗತ ಮಾತುಗಳನ್ನಾಡಿ `ನಿಜವಾದ ದೇಶಪ್ರೇಮ ಎಂದರೆ ಏನು ಎಂಬುದರ ಅರಿವು ಎಲ್ಲರಲ್ಲಿ ಆಗಿ ಜಾಗೃತ ಸಮಾಜ ನಿರ್ಮಾಣವಾಗಲಿ ಎಂದು ಆಶಯವ್ಯಕ್ತಪಡಿಸಿದರು.
ಉಡುಪಿ ಜಿಲ್ಲೆಯ ಒಟ್ಟು ಹದಿನಾಲ್ಕು ಪ್ರೌಢಶಾಲಾ ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು ಸಾಗರ್ ವಿದ್ಯಾಮಂದಿರ್ ಹೈಸ್ಕೂಲ್ ಪಡುಬಿದ್ರಿ , ಟಿ. ಎ. ಪೈ ಆಂಗ್ಲಮಾಧ್ಯಮ ಶಾಲೆ ಕುಂಜಿಬೆಟ್ಟು ದ್ವಿತೀಯ, ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ ಮಣಿಪಾಲ್ ನ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದರು.
ಸಮಾಧಾನಕರ ಬಹುಮಾನವನ್ನು ಮಿಲಾಗ್ರಿಸ್ ಪ್ರೌಢಶಾಲೆ ಕಲ್ಯಾಣಪುರ ಮತ್ತು ಸೈಂಟ್ ಮೇರಿಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕನ್ನರ್ಪಾಡಿ ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡರು.
ತೀರ್ಪುಗಾರರಾಗಿ ಉಡುಪಿ ಜಿಲ್ಲಾ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಮುಕ್ತಾ ಶ್ರೀನಿವಾಸ್ ಭಟ್ ಕೊಡವೂರು ಮತ್ತು ಸಂಗೀತ ಶಿಕ್ಷಕರಾದ ಸ್ವಪ್ನಾರಾಜ್ ಚಿಟ್ಪಾಡಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿಕೇಂದ್ರದ ವತಿಯಿಂದ ಕನ್ನಡ ಸಾಹಿತ್ಯಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಕಟಪಾಡಿಯ ಕಾರುಣ್ಯ ಆಶ್ರಯಧಾಮಕ್ಕೆ ರೇಡಿಯೊ ಸೆಟ್ ವಿತರಿಸಲಾಯಿತು.
ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ. ರಶ್ಮಿ ಅಮ್ಮೆಂಬಳ ಧನ್ಯವಾದ ಸಮರ್ಪಿಸಿದರು. ಸ್ನೇಹಾ ವಿನೋದ್ ಪೈ ನಿರೂಪಿಸಿದರು. ಸಿಬ್ಬಂದಿಗಳಾದ ಮಂಜುನಾಥ್ ಜಿ.ಹೆಚ್, ಮೋಹನ್ ದಾಸ್ ಪೈ, ಪೀಟರ್ ಡಿಸೋಜ,ಕುಶಲ್ ಕುಮಾರ್ ಬಿ., ಸುಧೀರ್ ಸಾಮಂತ್, ಸದಾನಂದ್,ರಮೇಶ್, ಅನಿತಾ ,ರೇಡಿಯೊ ಮಣಿಪಾಲ್ ಸ್ವಯಂಸೇವಕರಾದ ಪ್ರಿಯಾ ಮತ್ತು ಎಂ.ಐ.ಸಿ. ವಿದ್ಯಾರ್ಥಿಗಳು
ಸಹಕರಿಸಿದರು. ಎಂ.ಐ.ಸಿ ಸಿಬ್ಬಂದಿಗಳು, ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಕಸಾಪ ಉಡುಪಿ ತಾಲೂಕು ಘಟಕದ ರವಿರಾಜ್, ಜನಾರ್ದನ ಕೊಡವೂರು ಮತ್ತು ಸತೀಶ್ ಕೊಡವೂರು ಉಪಸ್ಥಿತರಿದ್ದರು.