ಎಲೆಕ್ಟ್ರಾನಿಕ್ ಸಿಟಿಯಲ್ಲಿ ನ್ಯೂಟನ್ ಸ್ಕೂಲ್ ಆಫ್ ಟೆಕ್ನಾಲಜಿ ಹೊಸ ಕ್ಯಾಂಪಸ್ ಆರಂಭ

ಮಂಗಳೂರು , ಜೂನ್ 26, 2025: ನ್ಯೂಟನ್ ಸ್ಕೂಲ್ ಆಫ್ ಟೆಕ್ನಾಲಜಿ (NST) ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೊಸ ತಾಂತ್ರಿಕ ಶಿಕ್ಷಣ ಕ್ಯಾಂಪಸ್ ಆರಂಭಿಸಲು ಮುಂದಾಗಿದೆ. ಈ ಕ್ಯಾಂಪಸ್, ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್ ಮತ್ತು ಟೆಕ್ ಉದ್ಯಮಶೀಲತೆಯ ಭವಿಷ್ಯದ ನಾಯಕರನ್ನು ಸಿದ್ಧಪಡಿಸುವ ಗುರಿ ಹೊಂದಿದೆ.
ಎನ್ಎಸ್ಟಿ ತನ್ನ ಪ್ರಾಯೋಗಿಕ ಮತ್ತು ಉದ್ಯಮ-ಕೇಂದ್ರಿತ ಕಲಿಕಾ ಮಾದರಿಯ ಮೂಲಕ ಈಗಾಗಲೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಶೇ. 93% ರಷ್ಟು ವಿದ್ಯಾರ್ಥಿಗಳು ರೇಜರ್ಪೇ, ಸರ್ವಂ ಎಐ , ಜೂಮ್ಕಾರ್ನಂತಹ ಉನ್ನತ ಟೆಕ್ ಕಂಪನಿಗಳು ಹಾಗೂ ಡಿಆರ್ಡಿಒ ನಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಪಡೆದಿದ್ದಾರೆ.
2,500 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲಿರುವ ಈ ಹೊಸ ಕ್ಯಾಂಪಸ್, 1,000 ಕಲಿಯುವವರಿಗೆ ವಸತಿ ಸೌಲಭ್ಯವನ್ನೂ ಒಳಗೊಂಡಿದೆ. ಇಲ್ಲಿನ ಶೈಕ್ಷಣಿಕ ಮಾದರಿಯು ಕೇವಲ ಸಿದ್ಧಾಂತಕ್ಕೆ ಸೀಮಿತವಾಗದೆ, ನೈಜ-ಪ್ರಪಂಚದ ಉದ್ಯಮದ ಅನುಭವದೊಂದಿಗೆ ಸಂಯೋಜನೆಗೊಂಡಿದೆ. ಇದರಿಂದ ವಿದ್ಯಾರ್ಥಿಗಳು ಪ್ರಾಯೋಗಿಕ ಕೌಶಲ್ಯಗಳು, ಬಲವಾದ ಪೋರ್ಟ್ಫೋಲಿಯೋ, ಮತ್ತು ಉದ್ಯೋಗ-ಸಿದ್ಧ ಅನುಭವದೊಂದಿಗೆ ಪದವಿ ಪಡೆಯಲು ಸಾಧ್ಯವಾಗುತ್ತದೆ.
ನ್ಯೂಟನ್ ಸ್ಕೂಲ್ನ ಸಹ-ಸಂಸ್ಥಾಪಕ ಸಿದ್ಧಾರ್ಥ್ ಮಹೇಶ್ವರಿ ಅವರು ಮಾತನಾಡಿ, “ನ್ಯೂಟನ್ ಸ್ಕೂಲ್ನಲ್ಲಿ, ನಾವು ಟೆಕ್ ಉದ್ಯಮವನ್ನು ತರಗತಿಗೆ ತರುತ್ತಿದ್ದೇವೆ. ಆದ್ದರಿಂದ ಕಲಿಕೆಯು ಆಳವಾದ, ಪ್ರಾಯೋಗಿಕ, ಪ್ರಸ್ತುತ, ಮತ್ತು ಪರಿಣಾಮಕಾರಿಯಾಗಿರುತ್ತದೆ. ನಮ್ಮ ಗುರಿ ಕೇವಲ ಉದ್ಯೋಗ-ಸಿದ್ಧ ಪದವೀಧರರನ್ನು ಸೃಷ್ಟಿಸುವುದಲ್ಲ, ಭವಿಷ್ಯದ ಟೆಕ್ ನಾಯಕರು ಮತ್ತು ಉದ್ಯಮಿಗಳನ್ನು ಪೋಷಿಸುವುದು. ಅವರು ನಾಳಿನ ಡಿಜಿಟಲ್ ಲೋಕವನ್ನೇ ರೂಪಿಸುತ್ತಾರೆ” ಎಂದು ಹೇಳಿದ್ದಾರೆ.