ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ (ರಿ.) ಪ್ರವೀಣ್ ಕುಮಾರ್ ಶೆಟ್ಟಿ ಬಣಕ್ಕೆ ನೂರಾರು ಕಾರ್ಯಕರ್ತರ ಸೇರ್ಪಡೆ

Spread the love

ಉಡುಪಿ : ಡಿ.10: ಕರ್ನಾಟಕ ರಕ್ಷಣಾ ವೇದಿಕೆ (ರಿ.) ಪ್ರವೀಣ್ ಕುಮಾರ್ ಶೆಟ್ಟಿ ಬಣ ಉಡುಪಿ ಜಿಲ್ಲಾ ಘಟಕಕ್ಕೆ ನೂರಾರು ಕಾರ್ಯಕರ್ತರು ಸೇರ್ಪಡೆಗೊಳ್ಳುವ ಮುಖೇನ ಜಿಲ್ಲಾ ಘಟಕವನ್ನು ಬಲಿಷ್ಟಗೊಳಿಸಲಾಯಿತು.
ರಾಜ್ಯ ಸಂಚಾಲಕರಾದ ಪ್ರಸನ್ನ ಶೆಟ್ಟಿ ಹೆಬ್ರಿ ಅವರು ಕರವೇ ಹೋರಾಟದ ಕಿರು ಪರಿಚಯವನ್ನಿತ್ತು, ಕರವೇ ಉಡುಪಿ ಜಿಲ್ಲಾ ಘಟಕವನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದೇವೆ. ನೂತನ ಜಿಲ್ಲಾ ಘಟಕವನ್ನು ಅತೀ ಶೀಘ್ರದಲ್ಲಿ ರಚಿಸಲಾಗುವುದು. ಜಿಲ್ಲೆಯ ಉಸ್ತುವಾರಿಗಳಾಗಿ ಜಿಲ್ಲಾ ಸಂಚಾಲಕರನ್ನು ನೇಮಕ ಮಾಡಿ, ಅಧಿಕೃತ ಸದಸ್ಯರು ಆಯ್ಕೆ ಮಾಡುವ ಒಬ್ಬ ಜವಾಬ್ದಾರಿಯುತ ನಾಯಕನನ್ನು ಜಿಲ್ಲಾ ಅಧ್ಯಕ್ಷನನ್ನಾಗಿ ಮಾಡುವ ಪ್ರಕ್ರಿಯೆ ನಮ್ಮಲ್ಲಿದ್ದು ಅದು ಇಲ್ಲಿಯೂ ಮುಂದುವರಿಯುವುದು ಎಂದರು.

ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ನೂತನ ಕಾರ್ಯಕರ್ತರನ್ನು ಸೇರ್ಪಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಯಾರೊಬ್ಬರ ಸ್ವತ್ತಲ್ಲ,ಆರು ಕೋಟಿ ಕನ್ನಡಿಗರ ಆಸ್ತಿ, ಸಂಘಟನೆಗಾಗಿ ಹಲವಾರು ಮುಖಂಡರುಗಳ ಸಾವು ನೋವುಗಳು ಸಂಭವಿಸಿವೆ, ಹಲವಾರು ಪ್ರಭಾವಿ ನಾಯಕರ ಹೋರಾಟಗಳ ಪ್ರತಿಫಲವೇ ನಮ್ಮೀ ಬಲಿಷ್ಠ ಸಂಘಟನೆ, ಈ ಸಂಘಟನೆಗೆ ಸೇರುವ ಪ್ರತಿಯೊಬ್ಬ ಕನ್ನಡಿಗನೂ ಯಾವ ಬೆದರಿಕೆಗೂ ಬಗ್ಗದೆ ಧೈರ್ಯವಾಗಿ ಮುನ್ನುಗ್ಗಿ ಬನ್ನಿ ನಿಮ್ಮೊಂದಿಗೆ ಸದಾ ನಾನಿದ್ದೇನೆ ಎನ್ನುವ ಭರವಸೆಯ ಮಾತುಗಳನ್ನಾಡಿದರು.

ನೂತನ ಉಡುಪಿ ಜಿಲ್ಲಾ ಸಂಚಾಲಕರಾಗಿ ಅ. ರಾ. ಪ್ರಭಾಕರ್ ರಾಜ್ ಪೂಜಾರಿ, ಕುಶಲ್ ಅಮೀನ್ ಬೆಂಗ್ರೆ, ಜಯ ಪೂಜಾರಿ, ಸುದೀರ್ ಪೂಜಾರಿ ಮತ್ತು ಸೈಯ್ಯದ್ ನಿಜಾಮುದ್ದೀನ್ ಅವರನ್ನು ನೇಮಕ ಮಾಡಿ ಜಿಲ್ಲೆ ಮತ್ತು ಪ್ರತೀ ತಾಲ್ಲೂಕು ಘಟಕ ರಚಿಸಿ ಸಂಘಟನೆ ಕಟ್ಟುವ ಜವಾಬ್ದಾರಿಯನ್ನು ಅಧಿಕೃತವಾಗಿ ಘೋಷಿಸಿದರು.

ನೂತನ ಜಿಲ್ಲಾ ಸಂಚಾಲಕರಾದ ಪ್ರಭಾಕರ್ ಪೂಜಾರಿ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದೊಂದಿಗೆ ಉಡುಪಿ ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಬಲಿಷ್ಠ ಸಂಘಟನೆ ಕಟ್ಟುವ ಮೂಲಕ ಪ್ರತಿಯೊಂದು ಹೋರಾಟಕ್ಕೂ ಜೊತೆಯಾಗುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರವೇ ಉಡುಪಿ ಘಟಕದ ವತಿಯಿಂದ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ರಾಜ್ಯ ಕಾರ್ಯದರ್ಶಿ ಲೋಕೇಶ್ ಎಂ, ಉದ್ಯಮಿ ಗೋಪಾಲ್ ಮೆಂಡನ್, ಬೆಂಗಳೂರು ಉದ್ದಿಮೆದಾರರ ಘಟಕದ ಅಧ್ಯಕ್ಷ ಚಂದ್ರಣ್ಣ, ನಿಕಟಪೂರ್ವ ಜಿಲ್ಲಾಧ್ಯಕ್ಷ ಅನ್ಸರ್ ಅಹಮ್ಮದ್, ಉಡುಪಿ ತಾಲೂಕು ಅಧ್ಯಕ್ಷ ಸುಧೀರ್ ಪೂಜಾರಿ, ಕಾಪು ತಾಲ್ಲೂಕು ಅಧ್ಯಕ್ಷ ಸೈಯದ್ ನಿಜಾಮುದ್ದೀನ್, ಕಾರ್ಕಳ ತಾಲ್ಲೂಕು ಅಧ್ಯಕ್ಷ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.

ಕರವೇ ಮುಖಂಡರಾದ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಷಾ ಆಚಾರ್ ಪಳ್ಳಿ ಸ್ವಾಗತಿಸಿ, ಪ್ರದೀಪ್ ಹಾವಂಜೆ ಕಾರ್ಯಕ್ರಮ ನಿರೂಪಿಸಿ, ಅವಿನಾಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

Right Click Disabled