ಬಿಜೆಪಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರ ಖಚಿತ- ನಳಿನ್ ಕುಮಾರ್ ಕಟೀಲ್

Spread the love

ಹಾಸನ: ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಎರಡು ಹೋಳಾಗಲಿದೆ. ಹಾಗೆಯೇ
ಬಿಜೆಪಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಹಾಸನದ ಹೋಟೆಲ್ ಅಶೋಕದಲ್ಲಿ ಇಂದು ಹಮ್ಮಿಕೊಂಡಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಕುರ್ಚಿಗಾಗಿ ಒಳಜಗಳ ಇನ್ನಷ್ಟು ಹೆಚ್ಚಾಗಲಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಸಿದ್ರಾಮಣ್ಣನ ಗುಂಪು ಡಿಕೆಶಿ ಗುಂಪನ್ನು ಮತ್ತು ಡಿಕೆಶಿ ಗುಂಪು ಸಿದ್ರಾಮಣ್ಣನ ಅಭ್ಯರ್ಥಿಗಳನ್ನು ಸೋಲಿಸಲಿದ್ದಾರೆ. ಬಿಜೆಪಿ ವಿಕಾಸವಾದದ ಮೂಲಕ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
60 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ಯಾವ ರೈತನ ಖಾತೆಗೂ ಅದು ನೇರವಾಗಿ ಹಣ ಹಾಕಲಿಲ್ಲ. ಹಳ್ಳಿಯ ತಾಯಂದಿರಿಗೆ ಅನಿಲ ಭಾಗ್ಯ ಕೊಟ್ಟಿರಲಿಲ್ಲ. ಅವರ ಖಾತೆಗೆ ಹಣ ಹಾಕಿರಲಿಲ್ಲ. ಇವತ್ತು ಮನೆ ಮನೆಗೆ ಬ್ಯಾಂಕ್ ಖಾತೆ, ಶೌಚಾಲಯ ಸೌಲಭ್ಯ, ಮನೆ ಮನೆಗೆ ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ ಹಾಗೂ ಆಯುಷ್ಮಾನ್ ಯೋಜನೆ ಮೂಲಕ ಆರೋಗ್ಯ ಭಾಗ್ಯವನ್ನು ನರೇಂದ್ರ ಮೋದಿಯವರ ಸರಕಾರ ಕೊಟ್ಟಿದೆ. ಮನೆ ಮನೆಗೂ ಅದು ನೀರನ್ನು ನೀಡುತ್ತಿದೆ ಎಂದರು.
ಹಿಂದುಳಿದವರನ್ನು ಮುಂದೆ ತರುವ ಕೆಲಸವನ್ನು ಮೋದಿ ಸರಕಾರ ಮಾಡಿದೆ. ಹಿಂದಿನ ಕಾಂಗ್ರೆಸ್ ಸರಕಾರ ತುಷ್ಟೀಕರಣದ ರಾಜಕೀಯವನ್ನು ತನ್ನದಾಗಿಸಿಕೊಂಡಿತ್ತು ಎಂದು ವಿವರಿಸಿದರು. ತಿರಂಗಾ ಧ್ವಜಕ್ಕೆ ಜಗತ್ತೇ ಗೌರವ ನೀಡುವ ಕಾಲಘಟ್ಟ ಬಂದಿದೆ ಎಂದರು. ಪಠ್ಯಪುಸ್ತಕದಲ್ಲಿ ಯಾವುದೇ ಮಹಾನ್ ವ್ಯಕ್ತಿಯನ್ನೂ ಕಡೆಗಣಿಸಿಲ್ಲ. ಎಲ್ಲಾ ಸಮುದಾಯಕ್ಕೂ ಅದು ಗೌರವ ನೀಡಿದೆ.
ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ನಡೆದಿದೆ. ಕೇದಾರನಾಥ ಜೀರ್ಣೋದ್ಧಾರ ನಡೆಯುತ್ತಿದೆ. ಅಮರನಾಥದ ಕಾರ್ಯ ನಡೆದಿದೆ. ಯೋಗಕ್ಕೆ ಜಗತ್ತಿನ ಮನ್ನಣೆ ಸಿಕ್ಕಿದೆ ಎಂದು ಹೇಳಿದರು. ಆಯುರ್ವೇದಕ್ಕೆ ದೇಶ ಮತ್ತು ವಿದೇಶಗಳಲ್ಲಿ ಮನ್ನಣೆ ಸಿಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ವಿಶ್ವದ ಎತ್ತರಕ್ಕೆ ಕೊಂಡೊಯ್ಯುವ ಕಾರ್ಯವನ್ನು ತುಷ್ಟೀಕರಣದ ನೀತಿಯನ್ನು ಹೊರಗಿಟ್ಟು ಮಾಡಲಾಗುತ್ತಿದೆ ಎಂದರು.
ಬಿಜೆಪಿಯ ವಿಕಾಸವಾದದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ಕಾಂಗ್ರೆಸ್‍ನ ವಿನಾಶವಾದ, ಭ್ರಷ್ಟಾಚಾರವಾದದಿಂದ ಆ ಪಕ್ಷದ ಬಗ್ಗೆ ತಿರಸ್ಕಾರ ಹೆಚ್ಚಾಗಿದೆ. ಪರಿವಾರವಾದ, ಕುಟುಂಬವಾದವನ್ನು ಹೊರಗಿಟ್ಟು ಬಿಜೆಪಿ ವಿಕಾಸವಾದವನ್ನು ಮುಂದಿಡುತ್ತಿದೆ. ವಿಕಾಸವಾದ ಬಿಜೆಪಿ ಗೆಲುವಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು. ಜನರಿಗೆ ಇವತ್ತು ಬಿಜೆಪಿ ಬಗ್ಗೆ ಭರವಸೆ ಹೆಚ್ಚಿದೆ. ಈ ದೇಶದಲ್ಲಿ ಸುರಕ್ಷತೆಯಿಂದ ಬದುಕಲು ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ದೊಡ್ಡದು ಎಂದು ಜನರೇ ಹೇಳುತ್ತಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು. ಸಿದ್ದರಾಮಯ್ಯ ಅವರ ಸರಕಾರದಲ್ಲೂ ಹತ್ತಾರು ಹಗರಣಗಳು ಆಗಿದ್ದವು. ಅವುಗಳ ತನಿಖೆ ಮಾಡಿರಲಿಲ್ಲ. ಆದರೆ, ಬೊಮ್ಮಾಯಿಯವರ ಸರಕಾರ ಹಗರಣಗಳ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಜೈಲಿಗಟ್ಟುತ್ತಿದೆ ಎಂದು ಅಭಿನಂದಿಸಿದರು.
ಜಾತಿ, ಮತ, ಪಂಥವನ್ನು ಮೀರಿ ಬಿಜೆಪಿ ಬೆಳೆದಿದೆ. ಹಿಂದೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ರಾಷ್ಟ್ರಪತಿಗಳ ಸ್ಥಾನ ನೀಡಿದ್ದು, ಇದೀಗ ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಏರಿಸಲು ಬಿಜೆಪಿ ಮುಂದಾಗಿದೆ. ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಸದಾ ಗೌರವ ನೀಡಿದೆ. ಜನಮಾನಸದಲ್ಲಿ ಅದು ಅಭೂತಪೂರ್ವವಾದ ವಿಶ್ವಾಸವನ್ನು ಗಳಿಸಿದೆ ಎಂದು ವಿಶ್ಲೇಷಿಸಿದರು.
ಕುಟುಂಬ ರಾಜಕೀಯ, ಜಾತಿ ರಾಜಕೀಯದಲ್ಲಿ ಬಹಳ ವರ್ಷಗಳಿಂದ ಸಿಲುಕಿದ್ದ ಹಾಸನ ಜಿಲ್ಲೆಯಲ್ಲಿ ಇವತ್ತು ಅದ್ಭುತವಾಗಿ ನಮ್ಮ ಸಂಘಟನೆ ಶಕ್ತಿ ಬೆಳೆಯುತ್ತಿದೆ. ಕಮಲ ಇಲ್ಲಿ ಅರಳುತ್ತಿದೆ. ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ನಮ್ಮ ಶಕ್ತಿ ವೃದ್ಧಿಸಲು ಕೆಲಸ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ 5 ಸ್ಥಾನ ಪಡೆಯಲಿದ್ದೇವೆ. ಮಂಡ್ಯ ಜಿಲ್ಲೆಯಲ್ಲೂ ನಮ್ಮ ಶಕ್ತಿ ವೃದ್ಧಿ ಆಗಲಿದೆ. ಹಳೆ ಮೈಸೂರು ಭಾಗದಲ್ಲೂ ಪಕ್ಷದ ಬಲ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿ.ಬಿ.ಶಿವಪ್ಪ ಅವರಿಂದ ಪಕ್ಷಕ್ಕೆ ಕೊಡುಗೆ ದೊಡ್ಡದು ಎಂದು ನೆನಪಿಸಿದರು.
ಹಾಸನ ಜಿಲ್ಲೆ ಬಿಜೆಪಿಗೆ ಶಕ್ತಿ ತುಂಬಿದೆ. ಈ ಜಿಲ್ಲೆ ಒಂದು ಕುಟುಂಬಕ್ಕೆ ಸೀಮಿತವಲ್ಲ. ಇದು ರಾಷ್ಟ್ರೀಯ ವಿಚಾರಧಾರೆಗಳಿಗೆ ಶಕ್ತಿ ತುಂಬುತ್ತ ಬಂದಿದೆ. ಅದಕ್ಕಾಗಿ ಇಲ್ಲಿಂದಲೇ ನಮ್ಮ ವಿಜಯಯಾತ್ರೆ ಪ್ರಾರಂಭಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಹಾಸನಾಂಬೆಗೆ ನಮಿಸಿ ನಮ್ಮ ಕಾರ್ಯಶಕ್ತಿಯನ್ನು ವೃದ್ಧಿ ಮಾಡಬೇಕು. ವಾಸ್ತುಶಿಲ್ಪಕ್ಕೆ ಶಕ್ತಿ ತುಂಬಿದ ಪ್ರದೇಶವಿದು. ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಸ್ಥಾನ ಪಡೆಯುವ ಸಂಕಲ್ಪ ಮಾಡುವುದು ಮತ್ತು ಮುಂದಿನ ಕಾರ್ಯಯೋಜನೆಗಳನ್ನು ಇಲ್ಲಿ ಚರ್ಚಿಸಲಾಗುವುದು ಎಂದರು.
ಹಾಸನ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, 2023ರಲ್ಲಿ ರಾಜ್ಯದಲ್ಲಿ ಮತ್ತು 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾವೆಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯ್ ವರ್ಗಿಯ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಕೆ.ಸುರೇಶ್ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಪಕ್ಷದ ಎಲ್ಲ ಆಹ್ವಾನಿತ ಪ್ರಮುಖರು ಭಾಗವಹಿಸಿದ್ದರು.

Right Click Disabled