ಚೀನಾ: ಹಣ್ಣುಗಳನ್ನು ಖರೀದಿಸಿದವರು ಕ್ವಾರಂಟೈನ್ ಆಗುವಂತೆ ಆದೇಶ ಹೊರಡಿಸಿದ
ಹಣ್ಣುಗಳಲ್ಲಿ ಕರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಅನೇಕ ಸೂಪರ್ ಮಾರ್ಕೆಟ್ಗಳಿಗೆ ಚೀನಾ ಬೀಗ ಜಡಿದಿದೆ. ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಹಣ್ಣುಗಳಲ್ಲಿ ಮಹಾಮಾರಿ ಕರೊನಾ ವೈರಸ್ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ
ಚೀನಾದ ಝೆಜಿಯಾಂಗ್ ಮತ್ತು ಜಿಯಾಂಗ್ಸಿ ಪ್ರಾಂತ್ಯಗಳ 9 ನಗರಗಳಲ್ಲಿ ಡ್ರಾಗನ್ ಫ್ರೂಟ್ನಲ್ಲಿ ಕರೊನಾ ವೈರಸ್ ಪತ್ತೆಯಾಗಿದೆ. ಆಮದು ಮಾಡಿಕೊಂಡು ಹಣ್ಣಿನ ಉತ್ಪನ್ನಗಳು ಹಾಗೂ 9 ನಗರಗಳ ಹಣ್ಣುಗಳ ಮೇಲೆ ಚೀನಾ ತುರ್ತು ಪರೀಕ್ಷೆ ಆರಂಭಿಸಿದ್ದು, ಹಣ್ಣುಗಳನ್ನು ಖರೀದಿಸಿದ ಗ್ರಾಹಕರು ಕೂಡಲೇ ಕ್ವಾರಂಟೈನ್ ಆಗುವಂತೆ ಚೀನಾ ಆದೇಶ ಹೊರಡಿಸಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ಡ್ರಾಗನ್ ಫ್ರೂಟ್ನಲ್ಲಿ ಕೋವಿಡ್ ಪತ್ತೆಯಾದ ಹಿನ್ನೆಲೆಯಲ್ಲಿ ಜನವರಿ 26ರವರೆಗೂ ವಿಯೆಟ್ನಾಂನಿಂದ ಡ್ರಾಗನ್ ಫ್ರೂಟ್ ಆಮದನ್ನು ಈ ಮುಂಚೆಯೇ ಚೀನಾ ಬ್ಯಾನ್ ಮಾಡಿದೆ. ಲ್ಯಾಂಗ್ ಸನ್ ಪ್ರಾಂತ್ಯದಲ್ಲಿರುವ ಹೂ ಗಿ ಬಾರ್ಡರ್ ಗೇಟ್ ಮತ್ತು ತಾನ್ ತಾನ್ಹ ಗೇಟ್ನಲ್ಲಿ ಡ್ರಾಗನ್ ಫ್ರೂಟ್ ಆಮದನ್ನು ಬ್ಯಾನ್ ಮಾಡಿದೆ. ವಿಯೆಟ್ನಾಂನಿಂದ ಹಣ್ಣುಗಳನ್ನು ತುಂಬಿಕೊಂಡು ಬರುತ್ತಿರುವ ಎಲ್ಲ ಟ್ರಕ್ಗಳನ್ನು ವಾಪಸ್ ಕಳುಹಿಸಲಾಗುತ್ತಿದೆ.
ಈಗಾಗಲೇ ಕಟ್ಟುನಿಟ್ಟಾದ ಲಾಕ್‌ಡೌನ್ ಅಡಿಯಲ್ಲಿ ಚೀನಾದ ಕ್ಸಿಯಾನ್ ನಗರ ಸಮಸ್ಯೆ ಎದುರಿಸುತ್ತಿದ್ದು, ಮತ್ತೊಮ್ಮೆ ಕರೊನಾ ವೈರಸ್ ಸ್ಫೋಟಗೊಳ್ಳುವ ಭೀತಿ ಚೀನಾದಲ್ಲಿ ಎದುರಾಗಿದೆ. ಮೂರು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಹೆನಾನ್ ಪ್ರಾಂತ್ಯದಲ್ಲಿರುವ ಯುಝೊಹು ನಗರವೂ ಕೂಡ ಲಾಕ್‌ಡೌನ್ ಅಡಿಯಲ್ಲಿದೆ. ಹೊರಗೆ ಹೋಗದಂತೆ ಜನರಿಗೆ ಆದೇಶ ಹೊರಡಿಸಲಾಗಿದೆ. ಟ್ಯಾಕ್ಸಿ ಮತ್ತು ಬಸ್ ಸೇವೆಗಳನ್ನು ಬಂದ್ ಮಾಡಲಾಗಿದೆ. ಅಲ್ಲದೆ, ಶಾಪಿಂಗ್ ಮಾಲ್ ಸೇರಿದಂತೆ ಇತರೆ ಸಮುದಾಯ ಪ್ರದೇಶಗಳ ಮೇಲೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ.