ಮಂಡ್ಯ: ಮೊಬೈಲ್ ತಂದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಮುಖ್ಯಶಿಕ್ಷಕಿ
ಇಡೀ ಶಿಕ್ಷಕ ಸಮುದಾಯವೇ ತಲೆತಗ್ಗಿಸುವಂಥ ಹೇಯ ಕೃತ್ಯವೊಂದು ಮಂಡ್ಯದಲ್ಲಿ ನಡೆದಿದೆ. ಮೊಬೈಲ್ ತಂದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಮುಖ್ಯಶಿಕ್ಷಕಿಯೊಬ್ಬರು ಕೊಠಡಿಯಲ್ಲಿ ಕೂಡಿ ಹಾಕಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎಂಟನೆಯ ತರಗತಿಯ ವಿದ್ಯಾರ್ಥಿನಿ ಮೊಬೈಲ್ ಫೋನ್ ತಂದಿದ್ದು ಮುಖ್ಯ ಶಿಕ್ಷಕಿ ಸ್ನೇಹಲತಾ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆಕೆಯ ಬಟ್ಟೆಯನ್ನು ಉಳಿದ ವಿದ್ಯಾರ್ಥಿನಿಯರ ಎದುರೇ ಬಿಚ್ಚಿಸಿ ಕಿರುಕುಳ ಕೊಟ್ಟಿರುವ ಆರೋಪ ಕೇಳಿಬಂದಿದೆ.
ಶಾಲೆಗೆ ಮೊಬೈಲ್ ತಂದ ಕಾರಣಕ್ಕಾಗಿ ಬಾಲಕಿಯನ್ನು ಚೆನ್ನಾಗಿ ಥಳಿಸಿದ್ದಲ್ಲೆ, ವಿವಸ್ತ್ರಗೊಳಿಸಿ ಗಂಟೆಗಟ್ಟಲೇ ನಿಲ್ಲಿಸಿ, ಊಟಕ್ಕೂ ಬಿಡದೇ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕಿ, ‘ನಾನು ಮರೆತು ಮೊಬೈಲ್ ತಂದಿದ್ದೆ. ಮಧ್ಯಾಹ್ನ ಊಟದ ಸಂದರ್ಭದಲ್ಲಿ ಟೀಚರ್ ಫೋನ್ ತಂದಿರುವವರೆಲ್ಲಾ ನೀಡಿ ಎಂದು ಕೇಳಿದರು. ಆಗ ನಮ್ಮ ಬಳಿ ಫೋನ್ ಇರುವುದು ತಿಳಿಯಿತು. ಹುಡುಗರನ್ನು ಹೊರಕ್ಕೆ ಕಳುಹಿಸಿ ಬಾಲಕಿಯರ ಸಮ್ಮುಖದಲ್ಲಿ ಬಟ್ಟೆ ಬಿಚ್ಚಿದರು, ನಂತರ ಕೊಠಡಿಗೆ ಹೋಗಿ ಹೊಡೆದರು. ಫೋನ್ ಕೊಡದಿದ್ರೆ ಹುಡುಗರಿಂದ ಚೆಕ್ ಮಾಡಿಸುತ್ತೇನೆ ಎಂದರು. ಊಟದ ಸಮಯವಾದರೂ ಬಟ್ಟೆಯಿಲ್ಲದೆ ನೆಲದ ಮೇಲೆ ಕೂರಿಸಿ, ಜೋರಾಗಿ ಫ್ಯಾನ್ ಹಾಕಿದ್ದರು. ಚಳಿಯಾಗುತ್ತಿದೆ ಎಂದು ಎಷ್ಟೂ ಕೇಳಿಕೊಂಡರೂ ಬಿಡಲಿಲ್ಲ’ ಎಂದಿದ್ದಾಳೆ.
ಆರೋಪಿ ಮುಖ್ಯ ಶಿಕ್ಷಕಿ ಈಗಾಗಲೇ ಹಲವು ಬಾರಿ ಅಮಾನತಿಗೆ ಒಳಗಾಗಿದ್ದವರು ಎನ್ನಲಾಗಿದೆ. ಇದೀಗ ಬಾಲಕಿಯರ ಪಾಲಕರು ಇವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.