ಕರ್ಚಿಕಾಯಿ ಸುಗ್ಗಿ ಶುರುವಾಗಿದೆ
ಇನ್ನೇನು ಕಾರ್ಚಿಕಾಯಿ ಶುರುವಾಗಿದೆ ನಿನ್ನೆಯ ದಿನ ನಮ್ಮ ವಿಜಯಪುರ ದಲ್ಲಿ ದೊಡ್ಡ ಸಂತೆ ಸುತ್ತ ಇರುವ ಗ್ರಾಮದವರು, ತಾಲೂಕಿನವರ ಜನ ವ್ಯಾಪಾರ ಮತ್ತು ಖರೀದಿಗಾಗಿ ನಮ್ಮ ವಿಜಯಪುರಗೆ ಬರುತ್ತಾರೆ ಅಷ್ಟು ಪ್ರಸಿದ್ಧಿ ನಮ್ಮ ಸಂತೆ , ಹಾಗೆ ನಿನ್ನೆ ಗಾಂಧಿ ಚೌಕ್ ಬದಿಯಲ್ಲಿ ತರಕಾರಿ ವ್ಯಾಪಾರ ಸಹಜವಾಗಿ ವಿಶೇಷವಾಗಿರುತ್ತದೆ.
ಅದರಲ್ಲಿಯೂ ವಿಶೇಷ ಎಂದರೆ ಕಳೆಯಾಗಿ ನೈಸರ್ಗಿಕವಾಗಿ ಬೆಳೆಯುವ ಕರ್ಚಿಕಾಯಿ ಮತ್ತು ಹತ್ತರಕಿ ಪಲ್ಯ ಮಳೆಗಾಲದ ಸ್ಪೆಷಲ್.
200 ರೂಪಾಯಿಗೆ ಒಂದು ಕೇಜಿ ಕೊಡುತ್ತಾರೆ ಈ ಕರ್ಚಿಕಾಯಿ ಆದರೂ ಕಾಲು ಕೇಜಿಯಾದರು ಖರೀದಿಸಿ ತಿನ್ನಬೇಕೆಂಬುವ ಹಂಬಲ ಜನಕ್ಕಿರುತ್ತದೆ.
ನಾನು ಬೆಳಿಗ್ಗೆ ಕಾಲು ಕೇಜಿ ತಂದೆ ಅದರ ತೊಟ್ಟು ತೆಗೆದು ತೊಳೆದು ಹಂಚಿನ ಮೇಲೆ ಸ್ವಲ್ಪ ಎಣ್ಣೆ ಸ್ವಲ್ಪ ಈರುಳ್ಳಿ ಜಜ್ಜಿದ ಬೆಳ್ಳುಳ್ಳಿ ಹಸಿ ಮೆಣಸಿನಕಾಯಿ ( ಅಥವಾ ಖಾರದ ಪುಡಿ ) ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹುರಿದು ಅದಕ್ಕೆ ಕಾರ್ಚಿಕಾಯಿ ಸೇರಿಸಿ ಚೆನ್ನಾಗಿ ಹುರಿದರೆ ಸಿದ್ಧವಾಗುತ್ತೆ.
ಬಿಸಿ ರೊಟ್ಟಿ ಜೊತೆಗೂ ಸೈ ಕಟಿ ರೊಟ್ಟಿ ಜೊತೆಗೂ ಜೈ
ಇದು ಉತ್ತರ ಕರ್ನಾಟಕದ ವಿಶಿಷ್ಟ ತರಕಾರಿ ಕರಿಗಳಲ್ಲಿ ಒಂದಾಗಿದೆ, ಇದು ಹೆಚ್ಚಾಗಿ ಉತ್ತರ ಕರ್ನಾಟಕದ ಮಳೆಗಾಲದಲ್ಲಿ ಲಭ್ಯವಿದೆ, ನನಗೆ ಇನ್ನೂ ನೆನಪಿದೆ, ನಾನು ನನ್ನ ತಾಯಿಯೊಂದಿಗೆ ಮಾರುಕಟ್ಟೆಗೆ ಹೋದಾಗಲೆಲ್ಲಾ, ಅವರು ಈ ತರಕಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದರು. ಏಕೆಂದರೆ ನಮ್ಮ ಮನೆಯಲ್ಲಿ ಎಲ್ಲರೂ ಇದನ್ನು ಇಷ್ಟಪಡುತ್ತಾರೆ ಮತ್ತು ಇದು ತುಂಬಾ ಅಪರೂಪ.
ಹಳ್ಳಿಗಳ ಮಹಿಳೆಯರು ಹತ್ತಿರದ ಕಾಡಿಗೆ ಹೋಗಿ ಅವುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ಇದರ ಆರೋಗ್ಯ ಪ್ರಯೋಜನಗಳಿಂದಾಗಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಇದು ಮೂತ್ರಪಿಂಡದ ಕಲ್ಲುಗಳು, ಮಧುಮೇಹ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಂತ ಕೆಲವರು ಹೇಳುತ್ತಾರೆ
ಜೋಳದ ರೊಟ್ಟಿ, ರಾಗಿ ರೊಟ್ಟಿ ಅಥವಾ ಅಕ್ಕಿ ರೊಟ್ಟಿಯೊಂದಿಗೆ ಇದನ್ನು ಸವಿಯಿರಿ, ಈ ಬೀಟ್ ಕಾಂಬಿನೇಷನ್ ಚೆನ್ನಾಗಿರುತ್ತದೆ. ಚಪಾತಿ ಜೊತೆ ತಿಂದರೆ ರುಚಿ ಚೆನ್ನಾಗಿರುವುದಿಲ್ಲ. ತಾಜಾ ಆಗಿ ಸೇವಿಸಿದರೆ ತುಂಬಾ ಆರೋಗ್ಯಕರ. ಸ್ವಲ್ಪ ಕಹಿಯಾಗಿದ್ದರೂ ರುಚಿಕರವಾಗಿರುತ್ತದೆ. ಅದೇ ಈ ಪಲ್ಯದ ವಿಶಿಷ್ಟತೆ. ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ….
ಮಲ್ಲಿಕಾರ್ಜುನ ಮ ಬುರ್ಲಿ

