*ಬಿಂಬದೊಳಗೊಬ್ಬ ಚಂದ್ರಚಿತ್ರ*

Spread the love


     ಉಡುಪಿಯ ಕರಾವಳಿ ತೀರದಲ್ಲೊಂದು ಊರು ಕಡೆಕಾರು. ಆಲ್ಲೊಬ್ಬ ಅದ್ಭುತ ಚಿತ್ರಕಲಾವಿದ ಚಂದ್ರಚಿತ್ರ ಎಂದೇ ಪ್ರಖ್ಯಾತಿ ಪಡೆದ ಚಂದ್ರಶೇಖರ, ಚಿತ್ರಕಲೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದಾತ. ಚಂದ್ರ ಚಿತ್ರರ ಪರಿಚಯ ಹೇಳುದಾದರೆ ಇವರು ಉಡುಪಿ ಕಡೆಕಾರಿನ ಪ್ರೇಮಾ ಹಾಗೂ ದೇಜು ಪೂಜಾರಿ ದಂಪತಿಗಳ ಹಿರಿಯ ಪುತ್ರ,ಅಪ್ಪ ಕೆ ಇ ಬಿ ಡಿಪಾರ್ಟಮೆಂಟಲ್ಲಿ ಹುದ್ದೆಯಲ್ಲಿದ್ದು ತನ್ನ ನಿವೃತ್ತಿಯಾದ ನಂತರ ಹಿರಿಮಗನಿಗೆ ತನ್ನ ಹುದ್ದೆಯನ್ನು ಒದಗಿಸಿಬೇಕೆಂದು ಆಸೆಯಿಂದ ಮಗನ ಉನ್ನತ ವ್ಯಾಸಂಗಕ್ಕೆ ಒತ್ತುಕೊಟ್ಟಿದ್ದರು. ಆದರೆ ಮಗ ಹತ್ತನೆ ತರಗತಿ ಮುಗಿಸಿ ಚಿತ್ರಕಲೆಯತ್ತ ಒಲವು ಮೂಡಿಸಿದ ವಿಚಾರದಿಂದ ಬೇಸತ್ತು ಮಗನಿಗೆ ಯಾವುದೇ ಪ್ರೋತ್ಸಾಹ ನೀಡಲಿಲ್ಲ. ಈ ಸಂದರ್ಭದಲ್ಲಿ ಉಡುಪಿಯ ಚಿತ್ರ ಗುರುಗಳಾದ ಕೆ.ಎಲ್ ಭಟ್ ಇವರಲ್ಲಿ  ಚಿತ್ರ ತರಬೇತಿಯನ್ನು ಪಡೆದು ಬಳಿಕ ಚಿತ್ರಗುರುಗಳ ಶಿಷ್ಯರಾದ ಪುರಂದರ ಸಾಲ್ಯಾನ್ ಮಲ್ಪೆ ಎಂಬವರಲ್ಲಿ ಬೋರ್ಡು ಬರೆಯುವುದು ಪೋಸ್ಟರ್ ಬರೆಯುವುದನ್ನು ಅಭ್ಯಾಸ ಮಾಡಿಕೊಂಡು ಕಮರ್ಷಿಯಲ್ ಪೇಂಟಿಂಗ್ ನಲ್ಲಿ ತನ್ನನ್ನು ತೊಡಗಿಸಿಕೊಂಡರು.       
      ದಿನದೂಡಲು ಇದರಿಂದ ಬರುವ ಸಂಪಾದನೆ ಸಾಕಾಗುತಿರಲಿಲ್ಲ,ಈ ಸಂದರ್ಭದಲ್ಲಿ ವಿದೇಶಕ್ಕೆ ನೌಕರಿ ಅರಸಿಕೊಂಡು ಹೋದ ಚಂದ್ರಚಿತ್ರಾರವರನ್ನು ಕಲಾಮಾತೆ ತನ್ನ ತೆಕ್ಕೆಯಿಂದ ಹೊರಬಿಡಲು ಒಪ್ಪಲಿಲ್ಲ. ಮತ್ತೆ ಊರಿಗೆ ಹಿಂತಿರುಗಿದ ಚಂದ್ರಚಿತ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಉದರ ನಿಮಿತ್ತ ಪ್ರೋಪೆಷನಲ್ ಆರ್ಟಿಸ್ಟ್ ಆಗಿ ತೊಡಗಿಸಿಕೊಂಡರು .ಮೊದಮೊದಲು ಯಾರೂ ಅವರನ್ನು ಗುರುತಿಸಲಿಲ್ಲ,ಆದರೆ ಕ್ರಮೇಣ ತನ್ನ ಕಲಾತ್ಮಕತೆಯಿಂದ ಜನರನ್ನು ತನ್ನತ್ತ ಸೆಳೆಯುವಲ್ಲಿ ಸಫಲರಾದರು ಲೈವ್ ಆರ್ಟ್ ವಾಲ್ ಪೇಂಟಿಂಗ್ ವರ್ಣ ಚಿತ್ರ ಫೇಸ್ ಪೇಂಟಿಂಗ್ ಬಿಡಿಸುವುದರಲ್ಲಿ ಅಪಾರ ಪರಿಣತಿ ಪಡೆದವರು. ತಾನು ತನ್ನ ಬೆಳೆವಣಿಗೆಗೆ ಯಾರಲ್ಲೂ ಕೈಚಾಚದೆ ತನ್ನ ಬೆನ್ನಿಗೆ ತಾನೇ ಶಹಬ್ಬಾಸ್ ಎಂದು ಕೈ ತಟ್ಟಿಕೊಂಡು ಮುಂದೆ ಬಂದ ಅಪೂರ್ವ ಪ್ರತಿಭೆ. ಕಲೆಯೇ ನನ್ನ ಉಸಿರು ಎಂದುಕೊಂಡು ಕಾಮನ ಬಿಲ್ಲಿಗೆ ತನ್ನ ಹೆಗಲನ್ನೇ ಏಣಿಯಾಗಿಸಿ ಬಣ್ಣ ಹಚ್ಚ ಹೊರಟ ಯುವ ಕಲಾವಿದ.ಸುಮಾರು ಇಪ್ಪತ್ತನಾಲ್ಕು ವರ್ಷಗಳಿಂದ ತನ್ನದೇ ಆದ ಚಿತ್ರ ಆರ್ಟ್ಸ್ ಎಂಬ ಚಿತ್ರ ತರಬೇತಿ ಸ್ಕೂಲನ್ನು ನಡೆಸಿಕೊಂಡು ಅನೇಕ ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸಿದ ಹೆಗ್ಗಳಿಕೆ ಇವರದು. ಇನ್ನೇನು ತಾನು ಈ ವೃತ್ತಿಯಲ್ಲಿ ಸೋಲುತಿದ್ದೇನೆ ಎಂಬ ಪರಿಸ್ಥಿತಿ ಒದಗಿ ಬಂದಾಗ ಹೆಗಲಾಗಿ ನಿಂತವರೆ ಕೊಡವೂರಿನ ಸಮಾಜ ಸೇವಕ ವಿಜಯ್ ಕೊಡವೂರು.ಕೊರೋನ ಸಂದರ್ಭದಲ್ಲಿ ಕೊಡವೂರಿನಲ್ಲಿ ನಡೆದ ಬ್ರಹತ್ ವಾಲ್ ಪೇಂಟಿಂಗ್ ನ್ನು ವಿಜಯ್ ಕೊಡವೂರು ಆಯೋಜಿಸಿದ್ದು ಚಂದ್ರಚಿತ್ರರವರು ಸಂಪೂರ್ಣ ಸಹಕಾರ ಕೊಟ್ಟು ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಶ್ರಮಿಸಿದ್ದಾರೆ.,ಬಡ ಮಕ್ಕಳಿಗೆ ಉಚಿತ ತರಬೇತಿ ನೀಡಿದ ಕಲಾ ಸಾಧಕರಾದ ಚಂದ್ರಚಿತ್ರ ಇತ್ತೀಚಿನ ಕೆಲವು ವರ್ಷಗಳಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಿ ಮಕ್ಕಳ ಪ್ರತಿಭೆ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನಂತೆ ಯಾವ ಮಕ್ಕಳು ಅವಕಾಶ ವಂಚಿತರಾಗಬಾರದೆಂಬ ಆಶಯ ಅವರದು .ಪ್ರಸ್ತುತ ದಿನಗಳಲ್ಲಿ ಉಡುಪಿಯಲ್ಲಿ ಅಪಾರ ಹೆಸರು ಮಾಡಿರುವ ಚಂದ್ರಚಿತ್ರ ಇವರು ಜಿಲ್ಲಾ ಚಿತ್ರಕಲಾ ಸಂಘಟನೆಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕಲಾಸಾಧನೆಯ ಗುರುತಿಸುವಿಕೆಗೆ ಆಪಾರ ಕಲಾಪ್ರೇಮಿಗಳೇ ಸಾಕ್ಷಿಯಾಗಿದ್ದಾರೆ. ತನ್ನದೇ ಆದ ಚಿತ್ರ ಆರ್ಟ್ಸ್ ಸ್ಕೂಲ್ ಮುಖಾಂತರ ವರ್ಷಂಪ್ರತಿ ಸ್ಪರ್ಧೆಗಳನ್ನು ನಡೆಸಿ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರನ್ನು ಫಲಕ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸುವುದರೊಂದಿಗೆ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಸಿಕೊಂಡು ಬಂದಿರುತ್ತಾರೆ. ಇನ್ನೊಬ್ಬರ ಏಳಿಗೆಗೆ ಶ್ರಮಿಸುವ ಚಂದ್ರ ಚಿತ್ರ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿರುವ ಕಲಾವಿದ . ಕಲೆಯನ್ನೇ ನಂಬಿದ ಇವರನ್ನು ಕಲಾದೇವತೆ ಕೈಬಿಡಲಿಲ್ಲ.ಉಡುಪಿ ಪರಿಸರದಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಚಂದ್ರಚಿತ್ರ ಆಧ್ಯಾತ್ಮಿಕ ವಿಚಾರವಾದಿಯಾಗಿದ್ದು ಇವರು ಅನೇಕ ಧಾರ್ಮಿಕ ಸೇವೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಇನ್ನುಮುಂದಿನ ದಿನಗಳಲ್ಲಿ ಕಲಾಸೇವೆಯಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದು,ಮುಂದೊಂದು ದಿನ ತನ್ನದೇ ಆದ ಕಲಾ ಅಕಾಡಮಿ ಸ್ಥಾಪಿಸಿ ಎಲ್ಲಾ ರೀತಿಯ
ಕಲೆಯನ್ನು ಅದರೊಳಗೆ ಹುಟ್ಟು ಹಾಕಬೇಕೆಂಬ ಮಹಾದಾಕಾಂಕ್ಷೆಯನ್ನು ಕಲಾಮಾತೆ ನೆರವೇರಿಸಿ ಕೊಡಲಿ ಎಂಬ ಆಶಯ.

*ಶೋಭಾ ದಿನೇಶ್ ಉದ್ಯಾವರ*

Right Click Disabled