ಎಚ್.ಡಿ. ಕುಮಾರಸ್ವಾಮಿಯವರಿಗೆ ವಿಶ್ವಕರ್ಮ ನಾಡೋಜ ಡಾ. ಬಿ. ಎಂ. ಉಮೇಶ್ ಕುಮಾರ್ ಅವರಿಂದ ಸಮದಾಯದ ಬೇಡಿಕೆ ಈಡೇರಿಕೆಗೆ ಮನವಿ
ಬೆಂಗಳೂರು: ಬೆಂಗಳೂರಿನ ಬಸವನಗುಡಿಯಲ್ಲಿರುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಶ್ರೀ ವಿಶ್ವಕರ್ಮ ಸೇವ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ. ಬಿ.ಎಂ ಉಮೇಶ್ ಕುಮಾರ್ ಅವರ ಕಾರ್ಯಾಲಯಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಆಗಮಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭಗವಾನ್ ವಿಶ್ವಕರ್ಮನಿಗೆ ಪುಷ್ಪನಮನ ಸಲ್ಲಿಸಿ, ವಿಶ್ವಕರ್ಮ ಸಮಾಜದ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿದರು. ವಿಶ್ವಕರ್ಮ ಸಮಾಜದ ಏಳಿಗೆಗೆಗಾಗಿ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನವು ಕೈಗೊಳ್ಳುತ್ತಿರುವ ಕೆಲಸ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ವಿಶ್ವಕರ್ಮ ಜನಾಂಗದ ಐತಿಹಾಸಿಕ ಸಮಾವೇಶದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಆ ಕಾರಣಕ್ಕೆ ಕ್ರಿಯಾಶೀಲ ಸಂಘಟನಕಾರ ಉಮೇಶ್ ಕುಮಾರ್ ಹಾಗೂ ಸಮಾಜ ಬಾಂಧವರ ಮೇಲಿನ ಪ್ರೀತಿಯಿಂದ ಆಗಮಿಸಿದ್ದೇನೆಂದರು.
“ಕಾಯಕ ಸಮುದಾಯವಾದ ವಿಶ್ವಕರ್ಮ ಸಮಾಜದ ಬೇಡಿಕೆಗಳು ಈಡೇರಬೇಕು. ತಮ್ಮ ಕುಶಲತೆಯ ಮೂಲಕ ಜೀವ ಇಲ್ಲದ ವಸ್ತುಗಳಿಗೆ ಜೀವ ತುಂಬುವ ದೈವಿಕ ಕೆಲಸವನ್ನು ವಿಶ್ವಕರ್ಮ ಸಮಾಜದವರು ಮಾಡುತ್ತಿದ್ದಾರೆ.ಸಮಾಜದ ನ್ಯಾಯಯುತ ಬೇಡಿಕೆಗಳ ಬಗ್ಗೆ ಡಾ. ಬಿ. ಎಂ. ಉಮೇಶ್ ಕುಮಾರ್ ಮನವಿ ಮಾಡಿ ಗಮನಸೆಳೆದಿದ್ದು ಅವರು ಸರ್ಕಾರದಿಂದ ಹಲವು ನಿರೀಕ್ಷೆಗಳನ್ನು ಹೊಂದಿದ್ದಾರೆ. ವಿಶ್ವಕರ್ಮ ಸಮಾಜದ ಬೇಡಿಕೆಗಳನ್ನೂ ಈಡೇರಿಸಲು ಮುಂದೆ ಅಧಿಕಾರಕ್ಕೆ ಬರುವ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ತಾವು ಮುಖ್ಯಮಂತ್ರಿಯಾದ ಕೂಡಲೇ ಸಮಾಜದ ಏಳಿಗೆಗೆ ಎಲ್ಲ ಅಗತ್ಯ ನೆರವು ಕಲ್ಪಿಸುವುದಾಗಿ ಕುಮಾರಸ್ವಾಮಿಯವರು ತಿಳಿಸಿದರು.
“ಇವತ್ತು ಉಮೇಶ್ ಕುಮಾರ್ ಅವರಂತಹ ಯುವಕರು ರಾಜ್ಯದಲ್ಲಿ ನಮ್ಮ ಪಕ್ಷ ಹಾಗೂ ವಿಶ್ವಕರ್ಮ ಸಮಾಜ ಸಂಘಟನೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಜೆಡಿಎಸ್ ಪಕ್ಷವನ್ನು 2023ರ ವಿಧಾನ ಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕು. ಇಂದು ರಾಜ್ಯದಲ್ಲಿನ ವಾತಾವರಣವನ್ನು ನೋಡಿದರೆ, ಜೆ.ಡಿ.ಎಸ್. ಸ್ವತಂತ್ರವಾಗಿ ಸರ್ಕಾರ ರಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಮಾಜ ಸಂಘಟನೆಯಲ್ಲಿ ನಿರತವಾಗಿರುವವರಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗುವುದು” ಎಂದು ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರಿಗೆ ಜೆ.ಡಿ.ಎಸ್. ಪಕ್ಷದ ಚಿನ್ಹೆಯಾದ ತೆನೆ ಹೊತ್ತ ಮಹಿಳೆಯ ಚಿನ್ನದ ಆಕೃತಿಯನ್ನು ಹಾಗೂ ಭಗವಾನ್ ವಿಶ್ವಕರ್ಮನ ವಿಗ್ರಹವನ್ನು ನೀಡಿ, ಸನ್ಮಾನ ಮಾಡಲಾಯಿತು.
ಡಾ ಉಮೇಶ್ ಕುಮಾರ್ ಮಾತನಾಡಿ “ವಿಶ್ವಕರ್ಮರು ಸಂಘಟಿತರಾಗಬೇಕು. ಒಗ್ಗಟ್ಟಾಗಬೇಕು. ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ವಿಶ್ವಕರ್ಮ ಸಮಾಜದ ಬೇಡಿಕೆಗಳ ಮನವಿ ಪತ್ರವನ್ನು ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಎಚ್ ಡಿ ಕುಮಾರಸ್ವಾಮಿಯವರಿಗೆ ನೀಡಲಾಗಿದ್ದು, ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಶ್ರೀ ಕಾಳಿಕಾಂಬ ಹಾಗೂ ವಿಶ್ವಕರ್ಮನ ಆಶೀರ್ವಾದದೊಂದಿಗೆ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಮುಖ್ಯಮಂತ್ರಿಯಾದ ನಂತರ ವಿಶ್ವಕರ್ಮ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಎಲ್ಲ ಅಗತ್ಯ ನೆರವನ್ನು ನೀಡುವುದಾಗಿ ಎಚ್ ಡಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆ ” ಎಂದು ತಿಳಿಸಿದರು.
ಉಮೇಶ್ ಕುಮಾರ್ ಅವರು ಪಕ್ಷದಲ್ಲಿ ಕೈಗೊಂಡ ಚಟುವಟಿಕೆಗಳ ವಿವರವನ್ನೊಳಗೊಂಡ ’ಜನತಾ ಸೇವಕ” ಪುಸ್ತಕವನ್ನು ಸಹ ಕುಮಾರಸ್ವಾಮಿಯವರು ಬಿಡುಗಡೆ ಮಾಡಿದರು.
ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಕೆ. ಎಸ್. ಪ್ರಭಾಕರ್, ವಿಧಾನ ಪರಿಷತ್ ಸದಸ್ಯ ಹಾಗೂ ಪರಿಷತ್ ಜೆಡಿಎಸ್ ಉಪ ನಾಯಕ ಟಿ. ಎ. ಶರವಣ, ಬಸವನಗುಡಿ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್, ಹಿರಿಯ ಮುಖಂಡ ಬಾಗೇಗೌಡ, ಸಮುದಾಯದ ವೇದಮೂರ್ತಿ ಹೊನ್ನಪ್ಪ ಆಚಾರ್, ಮಧುಸೂಧನ್, ಬಾಲಾಜಿ ಚಂದ್ರಶೇಖರ್, ನಂಜುಂಡಸ್ವಾಮಿ ಯವರು ಮತ್ತು ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ಬೆಂಗಳೂರು ಮಹಾನಗರ ಹಾಗೂ ಬಸವನಗುಡಿ ಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ನಾಗರಿಕರು ಅನೇಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.