ಅವಾಸ್ತವಿಕ, ಅವೈಜ್ಞಾನಿಕ, ಅಂವಿಧಾನಿಕವಾಗಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಿಸಬೇಕು : ಸಂಕಲ್ಪ ಸಮಾವೇಶದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಆಗ್ರಹ

Spread the love

ಬೆಂಗಳೂರು: ಪರಿಶಿಷ್ಟರ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿ ಅವಾಸ್ತವಿಕ, ಅವೈಜ್ಞಾನಿಕ, ಅಂವಿಧಾನಿಕವಾಗಿದ್ದು, ಈ ವರದಿಯನ್ನು ತಿರಸ್ಕರಿಸುವಂತೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹಿಸಿದೆ.

ನಗರದ ಮೆಜೆಸ್ಟಿಕ್‌ ನ ಕೆ.ಆರ್.ಎಸ್ ನಿಲ್ದಾಣದಿಂದ ಬೃಹತ್‌ ಜಾತಾ ಮೂಲಕ ಫ್ರೀಡಂ ಪಾರ್ಕ್ ನಲ್ಲಿ ಸೇರಿದ ಒಕ್ಕೂಟದ ಸದಸ್ಯರು, ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಶೋಷಿತ ಸಮುದಾದಗಳ ಜನ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಬೃಹತ್ ಜಾಥಾದಲ್ಲಿ ಭೋವಿ ಮಠಾಧೀಶರಾದ ಇಮ್ಮಡಿ ಸಿದ್ಧರಾಮರ ಸ್ವಾಮೀಜಿ, ಬಂಜಾರ ಸಮಾಜದ ಮಠಾಧೀಶರು ಹಾಗೂ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ಶಿವಾನಂದ ಎಂ ಭಜಂತ್ರಿ, ಮಾಜಿ ಸಚಿವ, ಶಾಸಕ ಅರವಿಂದ ಲಿಂಬಾವಳಿ ಮತ್ತಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಮಾತನಾಡಿ, ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ವರದಿ ಅನುಷ್ಠಾನವಾದರೆ ಶೋಷಿತ ಸಮುದಾಯಗಳಿಗೆ ಭಾರೀ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರದ ಮೊದಲ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕೆಲವು ಪರಿಶಿಷ್ಟ ಜಾತಿಗಳನ್ನು ಪಟ್ಟಿಯಿಂದ ಕೈಬಿಡುತ್ತಿರುವುದು ಕಾನೂನು ಬಾಹಿರವಾಗಿದ್ದು, ಕೂಡಲೇ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಅಲೆಮಾರಿ ಕೊರಮ ಕೊರಚ ಸೇರಿದಂತೆ ಹಲವಾರು ಜಾತಿಗಳ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸರ್ಕಾರ ಮೊದಲು ಪರಿಶಿಷ್ಟರ ಔದ್ಯೋಗಿಕ ಸ್ಥಿತಿಗತಿ ಮತ್ತು ಜನಾಂಗದ ವಸ್ತುನಿಷ್ಠ ಸ್ಥಿತಿಗತಿ ಕುರಿತು ಅಧ್ಯಯನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

“ಅಖಿಲ ಕರ್ನಾಟಕ ಕುಳುವ ಮಹಾಸಂಘ” (ಕೊರಮ ಕೊರಚ ಕೊರವ ಸಮುದಾಯಗಳ ಒಕ್ಕೂಟ) ದ ರಾಜ್ಯಾಧ್ಯಕ್ಷ ಶಿವಾನಂದ ಎಂ ಭಜಂತ್ರಿ ಮಾತನಾಡಿ, ಕೊರಮ, ಕೊರಚ ಹಾಗೂ ಬೋವಿ ಮತ್ತು ಲಂಬಾಣಿ ಸಮುದಾಯಗಳು ಆಯೋಗದ ವರದಿಯಿಂದ ಸಂಕಷ್ಟಕ್ಕೆ ಸಿಲುಕಲಿವೆ. ಸರ್ಕಾರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬಲಾಡ್ಯರಾಗಿರುವವರನ್ನು ಓಲೈಸಲು ಮುಂದಾಗಿದೆ. ನಿಜವಾಗಿ ದೊರೆಯಬೇಕಾದ ಸಮುದಾಯಗಲಳಿಗೆ ಮೀಸಲಾತಿ ವಂಚಿಸುತ್ತಿದೆ. ಇದು ಸರಿಯಲ್ಲ ಎಂದರು.

ನ್ಯಾ.ಸದಾಶಿವ ಆಯೋಗದ ವರದಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡದೇ ಬಿಜೆಪಿ ಸರ್ಕಾರ ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಪ್ರಯತ್ನದಲ್ಲಿ ತೊಡಗಿರುವುದು ಸರಿಯಲ್ಲ. ಪರಿಶಿಷ್ಟರಲ್ಲಿ ಒಳಮೀಸಲಿಗೆ ಕೇಂದ್ರ, ರಾಜ್ಯ ಸರ್ಕಾರ ಅಥವಾ ನ್ಯಾಯಾಲಯಕ್ಕಾಗಲೀ ಅವಕಾಶ ಇಲ್ಲ ಎಂದರು.

ಸಂವಿಧಾನಕ್ಕೆ ತಿದ್ದುಪಡಿ ಮಾಡದೇ ವರದಿ ಜಾರಿಗೊಳಿಸಲು ಸಾಧ್ಯವಿಲ್ಲ. ಪರಿಶಿಷ್ಟರಲ್ಲಿ ಒಳವರ್ಗೀಕರಣ ಮಾಡುವಂತೆ ಶಿಫಾರಸ್ಸು ಮಾಡಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಮೀಸಲಾತಿಯ ಪರಿಕಲ್ಪನೆಗೆ ಧಕ್ಕೆಮಾಡಿದಂತಾಗುತ್ತದೆ. ಈ ಸಮುದಾಯಗಳು ನಾನಾ ಕಾರಣಕ್ಕೆ ದೇಶದ ಉದ್ದಗಲಕ್ಕೂ ಚದುರಿ ಹೋಗಿವೆ. ಅವಮಾನ, ಅಸಮಾನತೆ, ತಾರತಮ್ಮ ಹಾಗೂ ಸಾಮಾಜಿಕ ಕಳಂಕಕ್ಕೆ ಗುರಿಯಾಗಿರುವವರ ರಕ್ಷಣೆ ಅಗತ್ಯವಾಗಿದೆ ಎಂದು ಹೇಳಿದರು.

ಗೌರವಾಧ್ಯಕ್ಷ ಜಿ ಚಂದ್ರಣ್ಣ, ರಾಜ್ಯ ಪ್ರಧಾನ ಕಾರ್ಯ ಕಾರ್ಯದರ್ಶಿ ಆನಂದ ಕುಮಾರ್‌ ಏಕಲವ್ಯ, ರಾಷ್ಟ್ರೀಯ ಕುಳುವ ಸಂಘದ ಕಾರ್ಯಾಧ್ಯಕ್ಷ ಆದರ್ಶ ಯಲ್ಲಪ್ಪ, ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಮತ್ತು ಎಲ್ಲಾ ಜಿಲ್ಲಾ ಅಧ್ಯಕ್ಷರೂ, ಪದಾಧಿಕಾರಿಗಳು ಮತ್ತು ಲಕ್ಷಾಂತರ ಸಂಖ್ಯೆಯಲ್ಲಿ ಕೊರಮ- ಕೊರಚ-ಕೊರವ ಸಮುದಾಯದವರು ಭಾಗವಹಿಸಿದರು.

Right Click Disabled