ಉಚಿತ ಅಂಗಾಂಗ ಜೋಡಣಾ ಶಿಬಿರ: ಸಹಸ್ರಾರು ದಿವ್ಯಾಂಗರಿಗೆ ಕೃತಕ ಅಂಗಗಳ ಜೋಡಣೆ

ಬೆಂಗಳೂರು; ಉದಯಪುರದ ನಾರಾಯಣ್ ಸೇವಾ ಸಂಸ್ಥಾನ್ ಕುಟುಂಬ ಮತ್ತು ಜನರಲ್ ಮೋಟಾರ್ಸ್ ಟೆಕ್ನಿಕಲ್ ಸೆಂಟರ್ ಇಂಡಿಯಾದಿಂದ ಇಂದಿನಿಂದ ಎರಡು ದಿನಗಳ ಉಚಿತ ಅತ್ಯಾಧುನಿಕ ಬೃಹತ್ ಅಂಗಾಂಗ ಜೋಡಣಾ ಶಿಬಿರ ನಡೆಯುತ್ತಿದೆ.
ವಿಶ್ವೇಶ್ವರ ಪುರಂನ ಮಿನರ್ವಾ ಸರ್ಕಲ್ ಬಳಿ ಇರುವ ಬಿ. ಅರಸೋಜಿ ರಾವ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬೃಹತ್ ಶಿಬಿರದಲ್ಲಿ ಸಹಸ್ರಾರು ದಿವ್ಯಾಂಗರು ಕೃತಕ ಅಂಗಾಂಗ ಜೋಡಿಸಿಕೊಂಡು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಅಪಘಾತ ಮತ್ತಿತರ ಕಾರಣಗಳಿಗಾಗಿ ಅಂಗಾಂಗಳನ್ನು ಕಳೆದುಕೊಂಡಿರುವ ಹಾಗೂ ಜನ್ಮತಃ ಸಮಸ್ಯೆಯುಳ್ಳ ದಿವ್ಯಾಂಗರಿಗಾಗಿ ಬೃಹತ್ ಸಮಾವೇಶ ಆಯೋಜಿಸಿದ್ದು, ಮುಂದಾಗಿಯೇ ನೋಂದಣಿ ಮಾಡಿಕೊಂಡಿರುವವರಿಗೆ ಮೊದಲ ಆದ್ಯತೆಯಂತೆ ಸೌಲಭ್ಯ ಕಲ್ಪಿಸಲಾಯಿತು. ಒಟ್ಟಾರೆ 1128 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಉದಯ್ ಪುರದ ನಾರಾಯಣ್ ಸೇವಾ ಸಂಸ್ಥಾನ್ ಕುಟುಂಬದ ಅಧ್ಯಕ್ಷ ಪ್ರಶಾಂತ್ ಅಗರ್ವಾಲ್ ತಿಳಿಸಿದರು.
ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ರಾಜಸ್ಥಾನದ ಉದಯಪುರದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಶಸ್ತ್ರಚಿಕಿತ್ಸೆ ಸಂಪೂರ್ಣ ಉಚಿತ ಎಂದು ಸೇವಾ ಸಂಸ್ಥಾನ್ ಮುಖ್ಯಸ್ಥ ಕುಂಬಿಲಾಲ್ ಮೆನೇರಿಯಾ ತಿಳಿಸಿದರು.
ಜನರಲ್ ಮೋಟಾರ್ ಟೆಕ್ನಿಕಲ್ ಸೆಂಟರ್ ನ ಪ್ರಧಾನ ನಿರ್ದೇಶಕರಾದ ಶಿವಕುಮಾರ್ ಜೈ ರಾಮ್, ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥ ವಿ. ಆನಂದ ವೇಲ್, ಚಲನಚಿತ್ರ ನಿರ್ದೇಶಕ ಸಾಯಿ ಪ್ರಕಾಶ್, ಮಹಾವೀರ್ ಎಂಟರ್ ಪ್ರೈಸಸ್ ನ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಜೈನ್, ನಿವೃತ್ತ ಎಸಿಪಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
