ಕುಖ್ಯಾತ ಅಂತರ್ ರಾಜ್ಯ ಮನೆ ಕಳ್ಳರ ಬಂಧನ, ಚಿನ್ನಾಭರಣ ಹಾಗೂ 2 ಕಾರು ಸಮೇತ 20 ಲಕ್ಷ ಬೆಲೆ ಬಾಳುವ ಸೊತ್ತುಗಳು ವಶ ಉಡುಪಿ
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ತಡೆಗಾಗಿ ಮಾನ್ಯ ಪೊಲೀಸ್ ಅಧೀಕ್ಷಕರು, ಉಡುಪಿ ರವರ ಆದೇಶದಂತೆ, ಬ್ರಹ್ಮಾವರ ವೃತ್ತದ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚಿಸಿದ್ದು, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕನಾದ ಶ್ರೀ ಅನಂತ ಪದ್ಮನಾಭ ರವರ ನೇತೃತ್ವದಲ್ಲಿ ಬ್ರಹ್ಮಾವರ ಠಾಣಾ ಪಿ.ಎಸ್.ಐ ಶ್ರೀ ಗುರುನಾಥ ಬಿ ಹಾದಿಮನಿ, ಕೋಟ ಠಾಣಾ ಪಿ.ಎಸ್.ಐ ಶ್ರೀ ಮಧು ಬಿ.ಇ, ಬ್ರಹ್ಮಾವರ ಠಾಣಾ ತನಿಖಾ ಪಿ.ಎಸ್.ಐ ಶ್ರೀಮತಿ ಮುಕ್ತಾಬಾಯಿ, ಪ್ರೊಬೆಷನರಿ ಪಿ.ಎಸ್.ಐ ಶ್ರೀ ಸುಬ್ರಹ್ಮಣ್ಯ ದೇವಾಡಿಗ, ಬ್ರಹ್ಮಾವರ ಠಾಣಾ ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಮೊಹಮ್ಮದ್ ಅಜ್ಮಲ್, ಅಣ್ಣಪ್ಪ ಹಾಗೂ ಕೋಟ ಠಾಣಾ ಸಿಬ್ಬಂದಿಯವರಾದ ಪ್ರಸನ್ನ, ರಾಘವೇಂದ್ರ, ಗೋಪಾಲ ನಾಯ್ಕ ಇವರನ್ನೊಳಗೊಂಡ ಜಂಟಿ ತಂಡವು ದಿನಾಂಕ 29/07/2022 ರಂದು ಬ್ರಹ್ಮಾವರ ಠಾಣಾ ಸರಹದ್ದಿನ ಹಾವಂಜೆ ಗ್ರಾಮದ ಶೇಡಿಗುಳಿ ಎಂಬಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಸ್ಯಾಂಟ್ರೋ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನಲ್ಲಿ ಮನೆಯ ಬಾಗಿಲು ಒಡೆಯುವ ಕಬ್ಬಿಣದ ರಾಡ್, ಬೆಳ್ಳಿಯ ಆಭರಣಗಳು ಪತ್ತೆಯಾಗಿದ್ದು, 3 ಜನ ಕುಖ್ಯಾತ ಕಳ್ಳರನ್ನು ಬಂಧಿಸಲಾಗಿರುತ್ತದೆ.
ದಸ್ತಗಿರಿಯಾದ ಆರೋಪಿಗಳ ಹೆಸರು ವಿಳಾಸ:
- ದಿಲೀಪ್ ಶೆಟ್ಟಿ ತಂದೆ: ರಘುರಾಮ ಶೆಟ್ಟಿ ವಾಸ:ಮಾತಶ್ರೀ ನಿಲಯ ಕೆರೆಬೆಟ್ಟು ಶಿವಪುರ ಗ್ರಾಮ ಹೆಬ್ರಿ, ತಾಲೂಕು ಉಡುಪಿ ಜಿಲ್ಲೆ. ಹಾಲಿ ವಾಸ: ಚಂದಾಪುರ, ಬೆಂಗಳೂರು
- ರಾಜನ್ ತಂದೆ : ಚಿನ್ನತಂಬಿ ,ವಾಸ: ಅಲಂಕೊಂಬು, ಮೆಟ್ಟುಪಾಳ್ಯಂ, ಕೊಯಿಮುತ್ತೂರು ಜಿಲ್ಲೆ ತಮಿಳುನಾಡು ರಾಜ್ಯ
- ಷಣ್ಮುಗಂ ಪ್ರಾಯ: 598 ವರ್ಷ ತಂದೆ: ದಿ. ಮಾರಿ ಮುತ್ತು ವಾಸ: 2/809 ಜಿ,ಕರಮಡೈ ರಸ್ತೆ, ಆಲಕೊಂಬು ಅಂಚೆ, ಜಡಯಂ ಪಾಳ್ಯಂ ತಾಕೂಕು, ಕೊಯಮುತ್ತೂರು ಜಿಲ್ಲೆ. ತಮಿಳ್ನಾಡು ರಾಜ್ಯ.
ದಿಲೀಪ್ ಶೆಟ್ಟಿ, ಶಿವಪುರ, ಹೆಬ್ರಿ ಎಂಬಾತನು ಸ್ಯಾಂಟ್ರೋ ಕಾರು ಮತ್ತು ಓಮಿನಿ ಕಾರನ್ನು ಬಳಸಿಕೊಂಡು ಬೆಂಗಳೂರಿನಿಂದ ಕಾರಿನಲ್ಲಿ ಕುಖ್ಯಾತ ಕಳ್ಳ (1) ರಾಜನ್ (2) ಕುಟ್ಟಿ ವಿಜಯನ್ (3) ಸಜಿತ್ ವರ್ಗಿಸ್ ಇವರೊಂದಿಗೆ ಬಂದು ಹಾಸನ, ದ.ಕ ಮತ್ತು ಉಡುಪಿ ಭಾಗದಲ್ಲಿ ಮನೆ ಕಳ್ಳತನ ನಡೆಸುತ್ತಿದ್ದನು. ರಾಜನ್ ತನ್ನ 19 ನೇ ವಯಸ್ಸಿನಿಂದ ಕಳ್ಳತನ ಮಾಡುತ್ತಿದ್ದು, ಆತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು-1, ಕುಮಟಾ-1, ಸುರತ್ಕಲ್ -4 ಹಾಗೂ ಕೇರಳ ರಾಜ್ಯದ ತಿರುಷೂರು-4, ಪಟ್ಟಂಬಿ-4, ತರೂರು-1, ತಮಿಳುನಾಡು ರಾಜ್ಯದ ನೀಲಗಿರಿ-3 ಪ್ರಕರಣಗಳು ದಾಖಲಾಗಿರುತ್ತದೆ. ಒಟ್ಟು ಉಡುಪಿ ಜಿಲ್ಲೆ ಸೇರಿ ರಾಜನ್ ಮೇಲೆ 22 ಕೇಸು ದಾಖಲಾಗಿದ್ದು ವಿವಿಧ ಠಾಣೆಗಳಲ್ಲಿ ಜಾಮೀನು ರಹಿತ ವಾರೆಂಟು ಇರುತ್ತದೆ.
ದಿಲೀಪ್ ಶೆಟ್ಟಿ ವಿರುದ್ದ ಈ ಹಿಂದೆ ಹಾಸನದ ಅರಸೀಕೆರೆ, ಬೆಂಗಳೂರಿನ ಆರ್.ಎಂ.ಸಿ ಯಾರ್ಡ್, ನಂದಿನಿ ಲೇಜೌಟ್ ಮತ್ತು ಮಂಡ್ಯದ ನಾಗಮಂಗಲ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಅಬಕಾರಿ, ಹನಿ–ಟ್ಯಾಪ್ ಪ್ರಕರಣ ಹಾಗೂ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ ಹಾಗೂ ಜಾಮೀನು ರಹಿತ ವಾರೆಂಟು ಇರುತ್ತದೆ.
ದಿಲೀಪ್ ಶೆಟ್ಟಿ ಹಾಗೂ ರಾಜನ್ ಇವರನ್ನು ವಿಚಾರಿಸಿದಾಗ ಬ್ರಹ್ಮಾವರ ಠಾಣಾ ಸರಹದ್ದಿನ 2 ರಾತ್ರಿ ಮನೆ ಕಳ್ಳತನ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ-1 ರಾತ್ರಿ ಮನೆ ಕಳ್ಳತನ ಹಾಗೂ ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ 2 ರಾತ್ರಿ ಮನೆ ಕಳ್ಳತನ ಪ್ರಕರಣಗಳಲ್ಲಿ ಸ್ವತ್ತು ಕಳವು, ಚಿನ್ನಾಭರಣ ಕಳವು ಮಾಡಿರುವುದು ತಿಳಿದು ಬಂದಿರುತ್ತದೆ. ಕಳ್ಳತನದ ಮಾಲುಗಳನ್ನು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಅಡವಿಟ್ಟಿರುವುದನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ.ದಿಲೀಪ್ ಶೆಟ್ಟಿ ಹಾಗೂ ರಾಜನ್ ಕಡೆಯಿಂದ ಸುಮಾರು 13 ಲಕ್ಷ ಬೆಲೆ ಬಾಳುವ ಚಿನ್ನಾಭರಣ , ಬೆಳ್ಳಿ ಆಭರಣ 500 ಗ್ರಾಂ, ಮೌಲ್ಯ ರೂ 20,000/-, ಕೃತ್ಯಕ್ಕೆ ಬಳಸಿದ ಸ್ಯಾಂಟ್ರೋ ಕಾರು ಮೌಲ್ಯ 5 ಲಕ್ಷ, ಒಂದು ಓಮಿನಿ ಕಾರು, ಮೌಲ್ಯ 2 ಲಕ್ಷ ಹಾಗೂ ಸುಮಾರು 20 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, 5 ಮನೆ ಕಳ್ಳತನ ಪ್ರಕರಣಗಳನ್ನು ಭೇಧಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷರಾದ ಶ್ರೀ ವಿಷ್ಣುವರ್ಧನ್ ಎನ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಟಿ. ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ ಶ್ರೀ ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷರು, ಉಡುಪಿ ಉಪ ವಿಭಾಗ, ಉಡುಪಿರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಶ್ರೀ ಅನಂತ ಪದ್ಮನಾಭ ಸಿ.ಪಿ.ಐ ಬ್ರಹ್ಮಾವರ, ಬ್ರಹ್ಮಾವರ ಠಾಣಾ ಪಿ.ಎಸ್.ಐ ಶ್ರೀ ಗುರುನಾಥ ಬಿ ಹಾದಿಮನಿ, ತನಿಖಾ ಪಿ.ಎಸ್.ಐ ಶ್ರೀಮತಿ ಮುಕ್ತಾಬಾಯಿ, ಕೋಟ ಠಾಣಾ ಪಿ.ಎಸ್.ಐ ಶ್ರೀ ಮಧು ಬಿ.ಇ, ಬ್ರಹ್ಮಾವರ ಠಾಣಾ ಪ್ರೊಬೆಷನರಿ ಪಿ.ಎಸ್.ಐ. ಶ್ರೀ ಸುಬ್ರಮಣ್ಯ ದೇವಾಡಿಗ, ಬ್ರಹ್ಮಾವರ ಠಾಣಾ ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಮೊಹಮ್ಮದ್ ಅಜ್ಮಲ್, ರಾಘವೇಂದ್ರ ಕಾರ್ಕಡ, ಸಬಿತಾ, ಸುರೇಶ ಬಾಬು, ದಿಲೀಪ್, ಅಣ್ಣಪ್ಪ ಹಾಗೂ ಕೋಟ ಠಾಣಾ ಸಿಬ್ಬಂದಿಯವರಾದ ಪ್ರಸನ್ನ, ರಾಘವೇಂದ್ರ, ದುಂಡಪ್ಪ, ಗೋಪಾಲ ನಾಯ್ಕ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಪಾಲ್ಗೊಂಡಿರುತ್ತಾರೆ. ಮಾನ್ಯ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಅಭಿನಂದಿಸಿರುತ್ತಾರೆ.