ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳ ಅಸ್ಥಿ ಮಜ್ಜೆಯ ಕಸಿ ಸೇವೆಗಳು- ನೊಂದ ರೋಗಿಗಳಿಗೆ ಭರವಸೆಯ ಆಶಾಕಿರಣ

Spread the love

ಮಣಿಪಾಲ, 3 ನೇ ಆಗಸ್ಟ್ 2022: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಭಾಗವಾಗಿರುವ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಮಕ್ಕಳ ಅಸ್ಥಿಮಜ್ಜೆ ಕಸಿ ಸೌಲಭ್ಯದ ಯಶಸ್ಸನ್ನು ಆಚರಿಸುವ ಕಾರ್ಯಕ್ರಮ ಮತ್ತು ಪತ್ರೀಕಾಘೋಷ್ಠಿಯನ್ನು ಇಂದು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರತ್ ಕುಮಾರ್ ರಾವ್ ಅವರು ಮಕ್ಕಳ ಅಸ್ಥಿಮಜ್ಜೆ ಕಸಿ ಕ್ಲಿನಿಕ್ ನ ಮಾಹಿತಿ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ, ” ಅಸ್ಥಿಮಜ್ಜೆ ಕಸಿ ವಿವಿಧ ಬಗೆಯ ಕ್ಯಾನ್ಸರ್ ಮತ್ತು ರಕ್ತ ಸಂಬಂಧಿ ಅಸ್ವಸ್ಥತೆಗಳಿಗೆ ಜೀವರಕ್ಷಕ ವಿಧಾನವಾಗಿದೆ”. “ಇಂತಹ ಸಂಕೀರ್ಣ ವೈದ್ಯಕೀಯ ಚಿಕಿತ್ಸೆಯನ್ನು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರುಗಳಲ್ಲಿ ಮಾತ್ರ ನಡೆಸಲಾಗುತಿತ್ತು. ಈಗ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲವು ಮಕ್ಕಳಿಗಾಗಿ ಈ ಸುಸಜ್ಜಿತ ಸೇವೆಗಳನ್ನು ಪ್ರಾರಂಭಿಸಿದೆ” ಎಂದು ಅವರು ಹೇಳಿದರು.

ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಅವರು “ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿ ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಲಭ್ಯವಿರುವುದರಿಂದ , ಇಂತಹ ಚಿಕಿತ್ಸೆ ಅವಶ್ಯವಿರುವ ಮಕ್ಕಳು ಈ ಪ್ರಕ್ರಿಯೆಗೆ ಹೆಚ್ಚು ದೂರ ಪ್ರಯಾಣಿಸುವ ಅಗತ್ಯವಿಲ್ಲ” ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರತೀಕಾ ವರದಿಗಾರರಿಗೆ ಮಣಿಪಾಲ ಆರೋಗ್ಯ ಕಾರ್ಡ್ ಅನ್ನು ಅವರು ವಿತರಿಸಿದರು.

ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕರಾದ ಡಾ ನವೀನ್ ಸಲಿನ್ಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಮಕ್ಕಳ ಅಸ್ಥಿಮಜ್ಜೆ ಕಸಿ ತಜ್ಞರಾದ ಡಾ.ವಿನಯ್ ಎಂ.ವಿ ಅವರು ಮಕ್ಕಳಲ್ಲಿ ಅಸ್ಥಿಮಜ್ಜೆಯ ಕಸಿ ಪ್ರಕ್ರಿಯೆಯ ಕುರಿತು ಅವಲೋಕನವನ್ನು ನೀಡಿದರು. ಸಹ ಪ್ರಾದ್ಯಾಪಕ ಮತ್ತು ವಿಭಾಗದ ಮುಖ್ಯಸ್ತರಾದ ಡಾ.ವಾಸುದೇವ ಭಟ್ ಕೆ ಮಾತನಾಡಿ, “ಅಸ್ಥಿಮಜ್ಜೆ ಕಸಿ ಮಾಡುವಿಕೆಯು ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ಅನೇಕ ರೋಗಿಗಳ ಜೀವನವನ್ನು ಬದಲಾಯಿಸಿದೆ. ವಿಭಾಗವು ಇಲ್ಲಿಯವರೆಗೆ ಇಂತಹ 10 ಕಸಿಗಳನ್ನು ಪೂರ್ಣಗೊಳಿಸಿದೆ ಮತ್ತು ಈ ರೋಗಿಗಳನ್ನು ಯಶಸ್ವಿಯಾಗಿ ಗುಣಪಡಿಸಿದೆ ಎಂದು ಹೇಳಿದರು.

ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ ಮಾಹಿತಿ ನೀಡಿ, ವಿಭಾಗವು ಸಾಧ್ಯವಾದಾಗಲೆಲ್ಲಾ ಆರ್ಥಿಕ ನೆರವು, ಪೂರಕ ಪೌಷ್ಟಿಕಾಂಶ ಮತ್ತು ವಸತಿ ಸೌಲಭ್ಯ ಒದಗಿಸುವ ಮೂಲಕ ಈ ರೋಗಿಗಳಿಗೆ ಸಮಗ್ರ ಚಿಕಿತ್ಸೆ ನೀಡುತ್ತಿದೆ ಎಂದರು. ಮಾರುಕಟ್ಟೆ ವಿಭಾಗದ ಕೃಷ್ಣ ಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು.

ವೈದ್ಯಕೀಯ ಅಧೀಕ್ಷಕರು

Right Click Disabled