ಆಂಬುಲೆನ್ಸ್‌ಗಾಗಿ ತಮ್ಮನ ಶವದೊಂದಿಗೆ ಗಂಟೆಗಟ್ಟಲೇ ರಸ್ತೆ ಬದಿ ಕುಳಿತ 8 ವರ್ಷದ ಬಾಲಕ

Spread the love

ಮಧ್ಯಪ್ರದೇಶದಲ್ಲಿ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಎಂಟು ವರ್ಷದ ಬಾಲಕನೋರ್ವ ತನ್ನ ಎರಡು ವರ್ಷದ ಪುಟ್ಟ ತಮ್ಮನ ಶವದೊಂದಿಗೆ ರಸ್ತೆ ಬದಿ ಕುಳಿತಿದ್ದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಮಗನ ಶವವನ್ನು ಸ್ವಗ್ರಾಮಕ್ಕೆ ಸಾಗಿಸಲು ಅಪ್ಪ ಅಂಬುಲೆನ್ಸ್‌ ತರಲು ಹೋದಾಗ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ರಕ್ತಹೀನತೆ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದ ತನ್ನ ಎರಡು ವರ್ಷದ ಮಗನನ್ನು ಮೊರೆನಾದ ಅಂಬಾ ತಹಸಿಲ್‌ನ ನಿವಾಸಿಯಾದ ಪೂಜಾರಾಮ್ ಜಾತವ್‌ ಅವರು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದರು. ತನ್ನ ಹಿರಿಯ ಮಗನೊಂದಿಗೆ ಪುಟ್ಟ ಕಂದನನ್ನು ಕರೆದುಕೊಂಡು ಅವರು ಮೊರೆನಾಗೆ ಆಂಬ್ಯುಲೆನ್ಸ್‌ನಲ್ಲಿ ಬಂದಿದ್ದರು. ಅಲ್ಲಿ ಮಗು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿತ್ತು. ನಂತರ ಸ್ವಗ್ರಾಮಕ್ಕೆ ಮಗುವಿನ ಶವವನ್ನು ಕೊಂಡೊಯ್ಯಲು ವಾಹನಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕೇಳಿದಾಗ ವೈದ್ಯರು ಮತ್ತು ಸಿಬ್ಬಂದಿ, ಆಸ್ಪತ್ರೆಯಲ್ಲಿ ವಾಹನ ಲಭ್ಯವಿಲ್ಲ ನೀವೇ ಸ್ವಂತವಾಗಿ ವಾಹನವನ್ನು ಬಾಡಿಗೆ ಪಡೆದು ಮಗುವಿನ ಮೃತದೇಹ ಕರೆದೊಯ್ಯುವಂತೆ ಹೇಳಿದರು ಎಂದು ಜಾತವ್ ಹೇಳಿದ್ದಾರೆ.
ನಂತರ ಆಂಬ್ಯುಲೆನ್ಸ್ ಚಾಲಕನೊಬ್ಬ ಶವವನ್ನು ಗ್ರಾಮಕ್ಕೆ ಕೊಂಡೊಯ್ಯಲು 1500 ರೂಪಾಯಿ ಕೇಳಿದ್ದಾನೆ ಆದರೆ ಜಾತವ್ ಬಳಿ ಅಷ್ಟು ಹಣ ಇರಲಿಲ್ಲ. ಆಸ್ಪತ್ರೆಯ ಆವರಣದೊಳಗೆ ವಾಹನ ಸಿಗದ ಜಾತವ್ ನಂತರ ತನ್ನ 8 ವರ್ಷದ ಮಗನನ್ನು ಉದ್ಯಾನವನದ ಮುಂದೆ ರಸ್ತೆಬದಿಯಲ್ಲಿ ಕೂರಿಸಿ ಕಿರಿಯ ಮಗನ ಶವವನ್ನು ಹಿರಿಯ ಮಗನ ಮಡಿಲಲ್ಲಿರಿಸಿ ವಾಹನ ಹುಡುಕಲು ಹೊರಟಿದ್ದಾನೆ. ಈ ವೇಳೆ ಹಿರಿಯ ಮಗು ತನ್ನ ಕಿರಿಯ ಸಹೋದರನ ಮೃತ ದೇಹವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ತನ್ನ ತಂದೆಯ ವಾಪಸಾತಿಗಾಗಿ ಗಂಟೆಗಟ್ಟಲೆ ಕಾದು ಕುಳಿತಿತ್ತು. ಪುಟ್ಟ ಸಹೋದರನ ಮೃತದೇಹವನ್ನು ಬಟ್ಟೆಯಿಂದ ಮುಚ್ಚಿಕೊಂಡು ನೊಣಗಳನ್ನು ಓಡಿಸುತ್ತಾ ಬಾಲಕ ನಿಸ್ಸಹಾಯಕನಾಗಿ ಕುಳಿತಿದ್ದ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೊತ್ವಾಲಿ ಪೊಲೀಸ್ ಉಸ್ತುವಾರಿ ಯೋಗೇಂದ್ರ ಸಿಂಗ್ ಸ್ಥಳಕ್ಕೆ ಧಾವಿಸಿ ಬಾಲಕನ ಮಡಿಲಿಂದ ಶವವನ್ನು ಮೇಲಕ್ಕೆತ್ತಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ನಂತರ ಬಾಲಕನ ತಂದೆ ಜಾತವ್ ಸ್ಥಳಕ್ಕಾಗಮಿಸಿದ್ದಾಗ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಶವವನ್ನು ಆಂಬ್ಯುಲೆನ್ಸ್ ಮೂಲಕ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ನನಗೆ ನಾಲ್ಕು ಮಕ್ಕಳು, ಮೂವರು ಗಂಡು ಮತ್ತು ಒಬ್ಬ ಮಗಳು ಇದ್ದಾರೆ. ನನ್ನ ಹೆಂಡತಿ ಮೂರು ತಿಂಗಳ ಹಿಂದೆ ತನ್ನ ಪೋಷಕರ ಮನೆಗೆ ಹೊರಟು ಹೋಗಿದ್ದಾಳೆ. ಅಂದಿನಿಂದ ನಾನು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಜಾತವ್ ಹೇಳಿದರು. ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ , ಮೊರೆನಾದಲ್ಲಿ 8 ವರ್ಷದ ಮಗು ತನ್ನ 2 ವರ್ಷದ ಕಿರಿಯ ಸಹೋದರನ ಶವದೊಂದಿಗೆ ಕುಳಿತಿತ್ತು. ತಂದೆ ಪೂಜಾರಾಮ್ ಜಾತವ್ ಮಗನ ಶವವನ್ನು ಗ್ರಾಮಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ನೀಡುವಂತೆ ಮನವಿ ಮಾಡಿದರು, ಆದರೆ ಗಂಟೆಗಟ್ಟಲೆ ಆಂಬ್ಯುಲೆನ್ಸ್ ಸಿಗಲಿಲ್ಲ. ರಾಜ್ಯದಲ್ಲಿ ಆಂಬ್ಯುಲೆನ್ಸ್‌ಗಳ ಕೊರತೆ ಏಕೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಬೇಕು ಎಂದು ಕಮಲನಾಥ್ ಆಗ್ರಹಿಸಿದ್ದಾರೆ.

Right Click Disabled