ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ವಿಶ್ವ ಥೈರಾಯ್ಡ್ ದಿನದ ಜಾಗೃತಿ ಮತ್ತು ಉಚಿತ ಥೈರಾಯ್ಡ್ ತಪಾಸಣೆ ಕಾರ್ಯಕ್ರಮ

Spread the love

ಮಣಿಪಾಲ 25ನೇ ಮೇ 2022:ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವಶಾಸ್ತ್ರ (ಎಂಡೋಕ್ರಿನೊಲೊಜಿ )ವಿಭಾಗವು ವಿಶ್ವ ಥೈರಾಯ್ಡ್ ದಿನದ ಅಂಗವಾಗಿ ಇಂದು ವಿಶ್ವ ಥೈರಾಯ್ಡ್ ನ ಜಾಗೃತಿ ಮತ್ತು ಉಚಿತ ಥೈರಾಯ್ಡ್ ಸ್ಕ್ರೀನಿಂಗ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪ್ರತಿ ವರ್ಷ ಮೇ 25 ಅನ್ನು ವಿಶ್ವ ಥೈರಾಯ್ಡ್ ದಿನ ಮತ್ತು ಮೇ 22 ರಿಂದ ಮೇ 28 ರವರೆಗೆ ಅಂತರಾಷ್ಟ್ರೀಯ ಥೈರಾಯ್ಡ್ ಜಾಗೃತಿ ವಾರವನ್ನಾಗಿ ಆಚರಿಸಲಾಗುತ್ತದೆ. “ಇದು ನೀನಲ್ಲ. ಇದು ನಿನ್ನ ಥೈರಾಯ್ಡ್” ಎಂಬುದು ಈ ವರ್ಷದ ಥೈರಾಯ್ಡ್ ಜಾಗೃತಿ ಸಪ್ತಾಹದ ವಿಷಯವಾಗಿದೆ. ಈ ಥೀಮ್‌ನೊಂದಿಗೆ, ಥೈರಾಯ್ಡ್ ಫೆಡರೇಶನ್ ಇಂಟರ್ನ್ಯಾಷನಲ್ (TFI) – ಥೈರಾಯ್ಡ್ ಅಸ್ವಸ್ಥತೆಗಳು ಇತರ ರೋಗಲಕ್ಷಣಗಳಿಗೆ ಕಾರಣವಾಗುತ್ತವೆ ಎಂದು ಸ್ಪಷ್ಟಪಡಿಸಲು ಬಯಸುತ್ತದೆ. ವಿಶ್ವ ಥೈರಾಯ್ಡ್ ದಿನವು ಥೈರಾಯ್ಡ್ ಕಾಯಿಲೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಅವುಗಳೆಂದರೆ ಸಕಾಲಿಕ ರೋಗನಿರ್ಣಯ, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯ ಪ್ರಾಮುಖ್ಯತೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ ಎಂ ಸಿ ಡೀನ್ ಡಾ. ಶರತ್ ಕೆ ರಾವ್ ಅವರು, ” ಥೈರಾಯ್ಡ್ ಉತ್ಪಾದಿಸುವ ಹಾರ್ಮೋನ್ ದೇಹದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಇದರ ಅಂಶ ಹೆಚ್ಚಾದರೂ ತೊಂದರೆ ಕಡಿಮೆಯಾದರೂ ತೊಂದರೆ. ಆದ್ದರಿಂದ ಇದನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಬೇಕಾದರೆ ವರ್ಷಕೊಮ್ಮೆಯಾದರೂ ಪರೀಕ್ಷೆ ಮಾಡಿಸಿಕೊಂಡು ಅವಶ್ಯವಿದ್ದರೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು” ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಇವರು, “ಭಾರತದಲ್ಲಿ ಹತ್ತು ಜನರಲ್ಲಿ ಒಬ್ಬರಿಗೆ ಈ ತೊಂದರೆ ಕಂಡುಬರುತ್ತದೆ ಮತ್ತು ಆರಂಭದಲ್ಲಿ ಗೊತ್ತೇ ಆಗುವುದಿಲ್ಲ. ಇಂತಹ ಆರೋಗ್ಯ ದಿನಗಳನ್ನು ಆಚರಿಸುವುದರ ಉದ್ದೇಶ , ಜನರಿಗೆ ಜಾಗೃತಿ ಮೂಡಿಸುವುದು. ಏಕೆಂದರೆ ಯಾವುದೇ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುತ್ತದೆ . ವಿಶ್ವ ಥೈರಾಯ್ಡ್ ದಿನದ ಅಂಗವಾಗಿ ಡಾ. ಸಹನಾ ಶೆಟ್ಟಿ ನೇತ್ರತ್ವದ ಅಂತಃಸ್ರಾವಶಾಸ್ತ್ರ (ಎಂಡೋಕ್ರಿನೊಲೊಜಿ )ವಿಭಾಗವು ಉಚಿತವಾಗಿ ಥೈರಾಯ್ಡ್ ಪರೀಕ್ಷೆ ಮತ್ತು ಕಾಯಿಲೆಯ ಕುರಿತು ಜಾಗೃತಿ ಮೂಡಿಸುತ್ತಿದೆ” ಎಂದರು.

ಅಂತಃಸ್ರಾವಶಾಸ್ತ್ರ (ಎಂಡೋಕ್ರಿನೊಲೊಜಿ ) ವಿಭಾಗದ ಮುಖ್ಯಸ್ಥರಾದ ಡಾ. ಸಹನಾ ಶೆಟ್ಟಿ ಅವರು ಕಾರ್ಯಕ್ರಮದ ಕುರಿತು ಅವಲೋಕನ ನೀಡಿ ಥೈರಾಯ್ಡ್ ಕಾಯಿಲೆಯ ಮತ್ತು ಚಿಕಿತ್ಸಾ ಕ್ರಮದ ಕುರಿತು ವಿವರವಾಗಿ ಮಾತನಾಡಿದರು. ಒಂದು ಸಾವಿರಕ್ಕೂ ಹೆಚ್ಚು ಜನರು ಉಚಿತ ಥೈರಾಯ್ಡ್ ಪರೀಕ್ಷೆ ಮಾಡಿಸಿ ಇದರ ಪ್ರಯೋಜನ ಪಡೆದರು.

ವೈದ್ಯಕೀಯ ಅಧೀಕ್ಷಕರು

Right Click Disabled