ಪೊಂಪೈ ಕಾಲೇಜು ಸ್ಕಾರ್ಫ್-ಕೇಸರಿ ವಿವಾದ : ಡ್ರೆಸ್‌ಕೋಡ್ ಪಾಲಿಸಲು ಸೂಚನೆ : ಪ್ರಕರಣ ಸುಖಾಂತ್ಯ!
ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಪೊಂಪೈಯ ಖಾಸಗಿ ಕಾಲೇಜಿನಲ್ಲಿ ಆರಂಭಗೊಂಡಿದ್ದ ಸ್ಕಾರ್ಫ್ ಮತ್ತು ಕೇಸರಿ ಶಾಲು ಧರಿಸಿದ ವಿವಾದ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಎರಡೂ ಧರ್ಮದವರ ನಡುವೆ ಸೌಹಾರ್ದತೆ ಸಭೆಯ ಮೂಲಕ ಸಮಸ್ಯೆ ಬಗೆಹರಿದಿದೆ.
ಕಾಲೇಜಿನಲ್ಲಿ ಮಂಗಳವಾರ ಸ್ಕಾರ್ಫ್-ಕೇಸರಿ ವಿವಾದ ಪ್ರಾರಂಭವಾಗಿತ್ತು.
ಒಂದು ಕೋಮಿಗೆ ಸೇರಿದ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾದ ಕಾರಣ ಬುಧವಾರ ಇನ್ನೊಂದು ಕೋಮಿಗೆ ಸೇರಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿ ತರಗತಿ ಹಾಜರಾಗಿ ಗೊಂದಲದ ವಾತಾವರಣ ಸೃಷ್ಠಿಯಾಗಿ ಬುಧವಾರ ಮಧ್ಯಾಹ್ನದ ಬಳಿಕ ಶಾಲೆಗೆ ರಜೆ ನೀಡಲಾಗಿತ್ತು.
ಗುರುವಾರ ಕೂಡ ಎರಡು ಕೋಮಿನವರು ಶಾಲು ಮತ್ತು ಸ್ಕಾರ್ಫ್ ಧರಿಸಿ ಕಾಲೇಜಿಗೆ ಹಾಜರಾಗಿದ್ದರು. ಗುರುವಾರ ಸಂಜೆ ಕಾಲೇಜಿನಲ್ಲಿ ಜರುಗಿದ ಕಾಲೇಜಿನ ಆಡಳಿತ ಮಂಡಳಿ, ಊರಿನ ಪ್ರಮುಖರು,
ಪೊಲೀಸ್ ಇಲಾಖೆ ಮತ್ತು ಎರಡು ಧರ್ಮದ ಮುಖಂಡರ ಸಭೆಯಲ್ಲಿ ಕಾಲೇಜಿಗೆ ಸೇರುವಾಗ ವಿದ್ಯಾರ್ಥಿಗಳು ಒಪ್ಪಿಕೊಂಡ ನಿಯಮದಂತೆ ಡ್ರೆಸ್ ಕೋಡ್ ಪಾಲಿಸಬೇಕು. ಇದನ್ನು ಮೀರುವ ಹಾಗೆ ಇಲ್ಲ ಎಂಬ ನಿರ್ಧಾರದ ಬಗ್ಗೆ ಎರಡೂ ಧರ್ಮದವರು ಒಪ್ಪಿಕೊಂಡ ಬಳಿಕ ವಿವಾದ ಸೌರ್ಹದಯುತವಾಗಿ ಬಗೆಹರಿದಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದೀಗ ವಿವಾದ ಸುಖಾಂತಗೊಂಡಿದೆ.
ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ್ ಕೆ.ಎ.,
ದಾಮಸ್‌ಕಟ್ಟೆ ಕಿರೆಂ ಚರ್ಚ್‌ನ ಧರ್ಮಗುರು, ಟಿ.ಎಚ್. ಮಯ್ಯದ್ವಿ, ಈಶ್ವರ್ ಕಟೀಲು, ಕೆ.ಭುವನಾಭಿರಾಮ ಉಡುಪ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.